ಬೆಂಗಳೂರು: ಕೋವಿಡ್-೧೯ ವಿಷಯದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಯಾವುದೇ ಅಕ್ರಮ ನಡೆದಿರುವುದಿಲ್ಲ ಹಾಗೂ ಗುಣಮಟ್ಟದ ಉಪಕರಣಗಳನ್ನು ಖರೀದಿಸಿದ ಬೆಲೆಯನ್ನು ಇತರೆ ರಾಜ್ಯಗಳ ಖರೀದಿಗೆ ಹೋಲಿಕೆ ಮಾಡಿ ಆರೋಪ ಮಾಡುತ್ತಿರುವುದರಲ್ಲಿ ಸತ್ಯಾಂಶ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ತಿಳಿಸಿದರು.
ಇಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಮಾತನಾಡಿ ರಾಜ್ಯದಲ್ಲಿ ಕೋವಿಡ್ ಸಮಯದಲ್ಲಿ ಅಕ್ರಮ ನಡೆದಿದ್ದು, ಸರ್ಕಾರ ಉತ್ತರಿಸುವಂತೆ ಕೇಳಿದಾಗ ಮಾತನಾಡಿದ ಸಚಿವರು ಯಾವುದೇ ಉಪಕರಣಗಳು ಅವುಗಳ ಗುಣಮಟ್ಟ ಹಾಗೂ ನಾವೀನ್ಯತೆ ಮತ್ತು ವೈಶಿಷ್ಟತೆಗಳ ಆದಾರದ ಮೇಲೆ ಬೆಲೆಯನ್ನು ನಿಗಧಿ ಪಡಿಸಲಾಗಿರುತ್ತದೆ. ಅವುಗಳ ಆದಾರದ ಮೇಲೆ ಉತ್ತಮ ಗುಣಮಟ್ಟದ ವೈದ್ಯಕೀಯ ಉಪಕರಣಗಳನ್ನು ಖರೀದಿಸಲಾಗಿದೆ ಎಂದು ಹೇಳಿದರು.
ಇತರೆ ರಾಜ್ಯಗಳು ಕಡಿಮೆ ಬೆಲೆಯಲ್ಲಿ ಖರೀದಿಸಿರುವ ಉಪಕರಣಗಳನ್ನು ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ಬೆಲೆ ನೀಡಿ ಖರೀದಿಸಲಾಗಿದೆ ಎಂಬ ಆರೋಪದಲ್ಲಿ ಗುಣಮಟ್ಟದ ಬಗ್ಗೆ ಮಾತಿಲ್ಲ. ಅವರು ಹಾಗೂ ನಾವು ಖರೀದಿಸಿರುವ ಉಪಕರಣಗಳ ತಾಂತ್ರಿಕ ಗುಣಮಟ್ಟವನ್ನು ಹೋಲಿಕೆ ಮಾಡಿ ನೋಡಿ ಮಾತನಾಡಿ ಎಂದು ತಿಳಿಸಿದರು.
ಹೈ-ಡೆಫಿನೇಷನ್, ಬಹು-ಉಪಯೋಗಿ ಹಾಗೂ ೫೪ ವಿವಿಧ ತಂತ್ರಾಂಶಗಳನ್ನು ಹೊಂದಿರುವ ಉತ್ತಮ ಗುಣಮಟ್ಟದ ವೆಂಟಿಲೇಟರ್‌ಗಳನ್ನು ನಮ್ಮ ರಾಜ್ಯದಲ್ಲಿ ಖರೀದಿಸಲಾಗಿದ್ದು, ವೆಂಟಿಲೇಟರ್‌ಗಳು ಬೇಸಿಕ್ ಮಾಡೆಲ್‌ಗಳು ೪ ಲಕ್ಷ ರೂ.ಗಳಿಂದ ಪ್ರಾರಂಭವಾಗಿ ವಿವಿಧ ರೀತಿಯ ಗುಣಮಟ್ಟದ ವೆಂಟಿಲೇಟರ್‌ಗಳ ಬೆಲೆಯಲ್ಲಿ ವ್ಯತ್ಯಾಸವಿರುತ್ತದೆ ಎಂದು ಹೇಳಿದರು.
ಇದೇ ಸಮಯದಲ್ಲಿ ಶಿಕ್ಷಣ ಸಚಿವರ ಉತ್ತರಕ್ಕೆ ತೃಪ್ತಿಪಡದ ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಮದ್ಯೆ ಮಾತಾನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವೈದ್ಯಕೀಯ ಶಿಕ್ಷಣ ಸಚಿವರು ನೀಡಿರುವ ಲಿಖಿತ ರೂಪದ ಉತ್ತರವನ್ನು ಪರಿಶೀಲಿಸಿ ಮಾತನಾಡಿ ಎಂದು ಸಲಹೆ ನೀಡಿದರು.