ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇತ್ತೀಚೆಗೆ ಹೊರಡಿಸಿದ ಜನ ವಿರೋಧಿ ಸುಗ್ರೀವಾಜ್ಞೆಗಳು ಮತ್ತು ಹೊಸ ಮಸೂದೆಗಳನ್ನು ವಿರೋಧಿಸಿ ರಾಜ್ಯಾದ್ಯಂತ ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಸಮಿತಿಯು ಶುಕ್ರವಾರ ರಾಜ್ಯದಾದ್ಯಂತ ಹೆದ್ದಾರಿಗಳಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಿತು.
ಐಕ್ಯ ಹೋರಾಟ ಸಮಿತಿಯಿಂದ ಶುಕ್ರವಾರ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ಮಾಡಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡು ಪೊಲೀಸರು ಮುಖಂಡರುಗಳಾದ ಕುರುಬೂರು ಶಾಂತಕುಮಾರ್, ಬಡಗಲಪುರ ನಾಗೇಂದ್ರ, ಕೋಡಿಹಳ್ಳಿ ಚಂದ್ರಶೇಖರ್, ಮಾರುತಿ ಮಾನ್ಪಡೆ ಸೇರಿದಂತೆ ಹಲವು ಸಂಘಟನೆಗಳ ಮುಖಂಡರುಗಳನ್ನು ಬಂಧಿಸಿ ಆಡುಗೋಡಿ ಪೊಲೀಸ್ ಠಾಣೆ ಸಿಎಆರ್ ಗ್ರೌಂಡಿನಲ್ಲಿರಿಸಿ ಮಧ್ಯಾಹ್ನದ ಹೊತ್ತಿಗೆ ಬಿಡುಗಡೆ ಮಾಡಿದರು.
ರಾಜಧಾನಿ ಬೆಂಗಳೂರು ಮೈಸೂರು, ಚಿತ್ರದುರ್ಗ, ಶಿವಮೊಗ್ಗ, ಮಂಡ್ಯ, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಐಕ್ಯ ಹೋರಾಟ ಸಮಿತಿಯವರು ರಸ್ತೆ ತಡೆ ನಡೆಸಿ ಹೋರಾಟ ಮಾಡಿದರು. ಮೈಸೂರಿನ ಕೊಲಂಬಿಯಾ ಏಷಿಯಾ ವೃತ್ತದಲ್ಲಿ ಸಂಘಟನೆಗಳು ರಸ್ತೆ ತಡೆದು ಹೋರಾಟ ನಡೆಸಿದರು. ಪ್ರತಿಭಟನಾ ನಿರತರನ್ನು ಬಂಧಿಸಿದ ಪೊಲೀಸರು ಸಾರಿಗೆ ವಾಹನದ ಮೂಲಕ ಅವರನ್ನು ಬೇರೆಡೆಗೆ ಸ್ಥಳಾಂತರ ಮಾಡಿದರು.
ಸುಗ್ರೀವಾಜ್ಞೆಗಳನ್ನು ವಿರೋಧಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆಯಲ್ಲಿ 35ಕ್ಕೂ ಹೆಚ್ಚು ಸಂಘಟನೆಗಳು ಐಕ್ಯ ಹೋರಾಟದ ಅಡಿಯಲ್ಲಿ ಹೋರಾಟ ನಡೆಸುತ್ತಿವೆ. ರೈತ, ದಲಿತ ಹಾಗೂ ಕಾರ್ಮಿಕ ಸಂಘಟನೆಗಳ ಹಲವು ಬಣಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಇದೇ ತಿಂಗಳ 21ರಿಂದ ಸತತವಾಗಿ ರೈತರು ಪ್ರತಿಭಟನೆ ಮಾಡುತ್ತಿದ್ದರೂ ಸಹ ಸರ್ಕಾರದ ಪ್ರತಿನಿಧಿಗಳು ಬಂದು ಮಾತನಾಡಿ ಸಮಸ್ಯೆ ಆಲಿಸಿಲ್ಲ. ಆದ್ದರಿಂದ ಸಂಘಟನೆಗಳು ಇಂದು ಅನಿವಾರ್ಯವಾಗಿ ರಸ್ತೆ ತಡೆ ನಡೆಸಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿದರು.
ಹೋರಾಟಕ್ಕೆ ಬೆದರಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶುಕ್ರವಾರ ಸಂಜೆ ರೈತರ ಜೊತೆ ಮಾತುಕತೆ ನಡೆಸಿದರಾದರೂ ಮಾತುಕತೆ ಸಫಲವಾಗಿಲ್ಲ. ಸಿಎಂ ನಡೆಸಿದ ಸಂಧಾನ ಸಭೆಯಲ್ಲಿ ರಾಜ್ಯದ ರೈತ, ದಲಿತ ಮತ್ತು ಕಾರ್ಮಿಕ ಸಂಘಟನೆಗಳ ಪ್ರಮುಖ ಮುಖಂಡರು ಭಾಗವಹಿಸಿ, ಜನ ವಿರೋಧಿ ಕಾಯ್ದೆಯಗಳ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು. ಆದರೆ ಮಸೂದೆಗಳ ಮಂಡನೆಗೆ ಈಗಾಗಲೇ ಎಲ್ಲಾ ತಯಾರಿಯನ್ನು ಮಾಡಿಕೊಂಡಿರುವ ಸಿಎಂ ರೈತರ ಮಾತಿಗೆ ಒಪ್ಪಿಗೆ ನೀಡಿಲ್ಲ.
ಇನ್ನು ರೈತರು ನಡೆಸುತ್ತಿರುವ ಹೋರಾಟಕ್ಕೆ ಇಂದು ಚಲನಚಿತ್ರ ನಟ ಚೇತನ್ ಕೂಡಾ ಸಾಥ್ ನೀಡಿದರು. ರಸ್ತೆ ತಡೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಚೇತನ್ ಅವರನ್ನೂ ಸಹ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು. ಈ ವೇಳೆ ಚೇತನ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, `ದೇಶಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ಜನ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ, ಸರ್ಕಾರ ಜನ ವಿರೋಧಿ ನೀತಿಗಳನ್ನು ಕೈ ಬಿಡಬೇಕು’ ಎಂದು ಆಗ್ರಹಿಸಿದರು.
21ರಿಂದ ನಡೆಯುತ್ತಿರುವ ಹೋರಾಟ ಇಂದು ತೀವ್ರ ಸ್ವರೂಪ ಪಡೆದುಕೊಡಿದ್ದು, ಸಂಘಟನೆಗಳು ಹೋರಾಟವನ್ನು ಮುಂದುವರೆಸಿವೆ. ರೈತರು ಆಕ್ರೋಶಕ್ಕೆ ಸರ್ಕಾರ ಬೆದರಿದ್ದರೂ ಸಹ ಅದನ್ನು ತೋರಿಸಿಕೊಳ್ಳದೆ ತನ್ನ ಮೊಂಡಾಟ ಮುಂದುವರೆಸಿದೆ.