ಬೀದರ: ಅನಾರೋಗ್ಯದಿಂದಾಗಿ ಸೆ.24ರಂದು ಬೆಂಗಳೂರಿನಲ್ಲಿ ನಿಧನರಾದ ಬಸವಕಲ್ಯಾಣ ಕ್ಷೇತ್ರದ ಶಾಸಕರಾದ ಬಿ.ನಾರಾಯಣರಾವ್ ಅವರ ಅಂತ್ಯಕ್ರಿಯೆಯು ಜಿಲ್ಲಾಡಳಿತ ವತಿಯಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಬಸವಕಲ್ಯಾಣದ ಹೊರವಲಯದ, ಕೈಗಾರಿಕಾ ಪ್ರದೇಶ ಸಮೀಪ ಇರುವ, ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಾಗೃತಿ ಆಶ್ರಮ ಪಕ್ಕದಲ್ಲಿರುವ ಖಾಸಗಿ ಲೇಔಟ್‌ನಲ್ಲಿ ಸೆ.25ರಂದು ನೆರವೇರಿಸಲಾಯಿತು.
ಸಾಮಾಜಿಕ ಅಂತರ ಕಾಪಾಡಿಕೊಂಡು, ಕನಿಷ್ಟ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ, ಕೋವಿಡ್-19ರ ಸರ್ಕಾರಿ ಮಾರ್ಗಸೂಚಿಗಳನ್ನು ಪಾಲಿಸಿ ಅಂತ್ಯಕ್ರಿಯೆ ನಡೆಸಲಾಯಿತು. ಇದೆ ವೇಳೆ ಸ್ವಾಮೀಜಿಗಳು ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ನಡೆಸಿದರು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕುಟುಂಬದ ಪರಿವಾರದವರು, ಶ್ರೀ ರತ್ನಾಕರ ಸ್ವಾಮೀಜಿ, ಹಾರಕೂಡದ ಶ್ರೀ ಚನ್ನವೀರ ಶಿವಾಚಾರ್ಯರು, ಗುರುಬಸವ ಪಟ್ಟದ್ದೇವರು, ಸಂಸದರಾದ ಭಗವಂತ ಖೂಬಾ, ಉಮೇಶ ಜಾದವ್, ಶಾಸಕರಾದ ಈಶ್ವರ ಖಂಡ್ರೆ, ಬಂಡೆಪ್ಪ ಖಾಶೆಂಪೂರ, ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಚಂದ್ರಶೇಖರ ಪಾಟೀಲ, ಗಣ್ಯರಾದ ಯು.ಟಿ.ಖಾದರ್, ಮಲ್ಲಿಕಾರ್ಜುನ ಖೂಬಾ, ನರಸಿಂಹರಾವ್ ಸೂರ್ಯವಂಶಿ, ಕೆ.ಪುಂಡಲೀಕರಾವ್, ಮಾರುತಿರಾವ್ ಮೂಳೆ ಹಾಗೂ ಇತರರು ಮತ್ತು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ ಡಿ.ಎಲ್., ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬಸವಕಲ್ಯಾಣ ಸಹಾಯಕ ಆಯುಕ್ತರು, ತಹಸೀಲ್ದಾರರು ಹಾಗೂ ಇತರರು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.