ಸುರಪುರ: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ತಾಲೂಕು ಪಂಚಾಯತಿ ಮುಂದೆ ಧರಣಿ ನಡೆಸಲಾಯಿತು.
ಬೆಳಿಗ್ಗೆ 11 ಗಂಟೆಗೆ ನಗರದ ಡಾ:ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಸೇರಿದ ನೂರಾರು ಜನ ಕಾರ್ಮಿಕರು ಸರಕಾರದ ವಿರುಧ್ಧ ಘೋಷಣೆಗಳನ್ನು ಕೂಗುತ್ತಾ ನಗರದ ಪ್ರಮುಖ ಬೀದಿಗಳ ಮೂಲಕ ತಾಲೂಕು ಪಂಚಾಯತಿ ವರೆದ ಪ್ರತಿಭಟನಾ ಮೆರವಣಿಗೆ ನಡೆಸಿದರು.ನಂತರ ತಾಲೂಕು ಪಂಚಾಯತಿ ಆವರಣದಲ್ಲಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ಸುರಪುರ ಮತ್ತು ಹುಣಸಗಿ ತಾಲೂಕಿನ ಅನೇಕ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕಾರ್ಮಿಕರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದರೆ ಉದ್ಯೋಗ ನೀಡುತ್ತಿಲ್ಲ,ಜಾಬ್ ಕಾರ್ಡ್ ನೀಡಿಲ್ಲ ಇನ್ನು ಅನೇಕ ಪಂಚಾಯತಿಗಳಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ಹಣ ನೀಡಿಲ್ಲ ಜನರು ಇದರಿಂದ ಬೇಸತ್ತಿದ್ದು ಪ್ರತಿಭಟನೆಗೆ ಮುಂದಾಗಿದೆ.ಕೂಡಲೆ ಕೆಲಸ ನೀಡಬೇಕು,ಕೂಲಿ ಹಣವನ್ನು ಬಿಡುಗಡೆ ಮಾಡಬೇಕು ಮತ್ತು ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದವರಿಗೆ ಜಾಬ್ ಕಾರ್ಡ್ ನೀಡಬೇಕು ಹಾಗು ಕೂಲಿ ಹಣ ಕನಿಷ್ಟ 600 ರೂಪಾಯಿಗೆ ಹೆಚ್ಚಿಸಬೇಕು ಮತ್ತು ವರ್ಷಕ್ಕೆ 200 ದಿನಗಳ ಕೂಲಿ ನೀಡಬೇಕೆಂದು ಆಗ್ರಹಿಸಿದರು.
ನಂತರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗೆ ಬರೆದ ಮನವಿಯನ್ನು ಸಹಾಯಕ ನಿರ್ದೇಶಕ ವಿಶ್ವನಾಥ ಅವರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶರಣು ಹನ್ಸೂರ್ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹಣಮಂತ ಕಟ್ಟಿಮನಿ ಬೊಮ್ಮನಹಳ್ಳಿ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಚಿನ್ನಾಕಾರ ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಪ್ರಕಾಶ ಆಲ್ಹಾಳ ದಾನಪ್ಪ ಕಡಿಮನಿ ಆನಂದ ಲಕ್ಷ್ಮೀಪುರ ಭಾಗವಹಿಸಿ ಮಾತನಾಡಿದರು.ನೂರಾರು ಜನ ಮಹಿಳಾ ಕಾರ್ಮಿಕರು ಮಳೆಯಲ್ಲಿಯೆ ಧರಣಿಯಲ್ಲಿ ಭಾಗವಹಿಸಿದ್ದರು.