ನಾಳೆ ದಾವಣಗೆರೆ ವಿವಿ 7ನೇ ವಾರ್ಷಿಕ ಘಟಿಕೋತ್ಸವ: 56 ಜನರಿಗೆ ಪಿಹೆಚ್‍ಡಿ ಪ್ರದಾನ

0
55

ದಾವಣಗೆರೆ: ದಾವಣಗೆರೆ ವಿಶ್ವ ವಿದ್ಯಾನಿಲಯದ 2018-19 ನೇ ಸಾಲಿನ ಏಳನೆ ವಾರ್ಷಿಕ ಘಟಿಕೋತ್ಸವ ಸಮಾರಂಭವನ್ನು ಸೆ. 30 ರಂದು ವಿವಿ ಆವರಣದಲ್ಲಿ ಕೋವಿಡ್ ನಿಯಂತ್ರಣ ಮಾರ್ಗಸೂಚಿಯನ್ವಯ ಸರಳವಾಗಿ ಆಯೋಜಿಸಲಾಗುವುದು ಎಂದು ವಿವಿ ಕುಲಪತಿ ಡಾ. ಎಸ್.ವಿ. ಹಲಸೆ ಅವರು ಹೇಳಿದರು.

ದಾವಣಗೆರೆ ವಿವಿ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮ ಕುರಿತಂತೆ ವಿವಿ ಆವರಣದ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

Contact Your\'s Advertisement; 9902492681

ಘಟಿಕೋತ್ಸವ ಸಮಾರಂಭದ ಅಂಗವಾಗಿ ರಾಜ್ಯಪಾಲರು ಹಾಗೂ ವಿವಿ ಕುಲಾಧಿಪತಿಗಳಾದ ವಜುಭಾಯಿ ರುಡಾಭಾಯಿ ವಾಲಾ, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥ ನಾರಾಯಣ ಅವರು ವರ್ಚುವಲ್ ವಿಡಿಯೋ ಕಾನ್ಫರೆನ್ಸ್ ಮೂಲಕ ಘಟಿಕೋತ್ಸವಕ್ಕೆ ಸಂದೇಶ ನೀಡುವರು. ಅಲ್ಲದೆ ವಿಕ್ರಮ್ ಸಾರಾಭಾಯಿ ಪ್ರೊಫೆಸರ್, ಇಸ್ರೋದ ಮಾಜಿ ಅಧ್ಯಕ್ಷರಾದ ಡಾ. ಎ.ಎಸ್. ಕಿರಣ್ ಕುಮಾರ್ ಅವರೂ ಕೂಡ ವರ್ಚುವಲ್ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯ ಅತಿಥಿಗಳಾಗಿ ಘಟಿಕೋತ್ಸವದ ಮುಖ್ಯ ಭಾಷಣ ಮಾಡುವರು. ಕೋವಿಡ್ ನಿಯಂತ್ರಣ ಸಂಬಂಧ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಂತೆ ಕಡ್ಡಾಯ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ ಸೇರಿದಂತೆ ಎಲ್ಲಾ ಸುರಕ್ಷಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸಮಾರಂಭವನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಸ್ವರ್ಣ ಪದಕ ಪಡೆದ ವಿದ್ಯಾರ್ಥಿಗಳು, ಅವರ ಪೋಷಕರು, ಗಣ್ಯಮಾನ್ಯರು ಸೇರಿದಂತೆ ಗರಿಷ್ಟ 250 ಜನ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಗೌರವ ಡಾಕ್ಟರೇಟ್ : ಈ ಬಾರಿ ದಾವಣಗೆರೆ ವಿಶ್ವವಿದ್ಯಾನಿಲಯ ವತಿಯಿಂದ ಒಬ್ಬರಿಗೆ ಮಾತ್ರ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದ್ದು, ಕಲಬುರ್ಗಿಯ ಶರಣಬಸವೇಶ್ವರ ಅಪ್ಪ ಶೈಕ್ಷಣಿಕ ಸಂಸ್ಥೆಗಳ ಅಧ್ಯಕ್ಷರಾಗಿರುವ ಮಾತೋಶ್ರೀ ದಾಕ್ಷಾಯಿಣಿ ಅಪ್ಪ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ಒಟ್ಟು 14 ಅರ್ಜಿಗಳು ಸ್ವೀಕೃತಗೊಂಡಿದ್ದವು. ಎಲ್ಲ ಅರ್ಜಿಗಳನ್ನು ಪರಿಶೀಲನಾ ಸಮಿತಿಯು ಪರಿಶೀಲಿಸಿ, 03 ಅರ್ಜಿಗಳನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿತ್ತು. ಈ ಪೈಕಿ ಮಾತೋಶ್ರೀ ದಾಕ್ಷಾಯಿಣಿ ಅಪ್ಪ ಅವರಿಗೆ ಮಾತ್ರ ಗೌರವ ಡಾಕ್ಟರೇಟ್ ನೀಡಲು ರಾಜ್ಯಪಾಲರಿಂದ ಅನುಮೋದನೆ ದೊರೆತಿದೆ. ಸೆ. 30 ರಂದು ಇವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಡಾ. ಎಸ್.ವಿ. ಹಲಸೆ ಹೇಳಿದರು.

56 ಜನರಿಗೆ ಪಿಹೆಚ್‍ಡಿ ಪ್ರದಾನ : ಸೆ. 30 ರಂದು ಜರುಗುವ ಏಳನೆ ಘಟಿಕೋತ್ಸವದಲ್ಲಿ 03 ಮಹಿಳೆ, 02 ಪುರುಷ ಅಭ್ಯರ್ಥಿಗಳು ಸೇರಿದಂತೆ ಒಟ್ಟು 05 ಜನರಿಗೆ ಎಂ.ಫಿಲ್. 11 ಮಹಿಳೆ ಹಾಗೂ 45 ಪುರುಷ ಅಭ್ಯರ್ಥಿಗಳು ಸೇರಿದಂತೆ ಒಟ್ಟು 56 ಅಭ್ಯರ್ಥಿಗಳಿಗೆ ಪಿಹೆಚ್‍ಡಿ ಪದವಿ ಪ್ರಧಾನ ಮಾಡಲಾಗುವುದು ಎಂದರು.

ವಿನಯವತಿಗೆ 04 ಸ್ವರ್ಣ ಪದಕ : ಕಳೆದ ಮೇ 2019 ರಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ, ಶಿವಗಂಗೋತ್ರಿ ದಾವಣಗೆರೆಯಲ್ಲಿ ಸ್ನಾತಕೋತ್ತರ ಕನ್ನಡ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಕೆ.ವಿ. ವಿನಯವತಿ ವಿದ್ಯಾರ್ಥಿನಿ ಅತಿ ಹೆಚ್ಚು ಅಂಕ ಪಡೆದು 04 ಸ್ವರ್ಣ ಪದಕಗಳನ್ನು ಬಾಚಿಕೊಂಡಿದ್ದಾರೆ. ಒಟ್ಟು 62 ಸ್ವರ್ಣ ಪದಕಗಳ ಪೈಕಿ ಸ್ನಾತಕ ಪದವಿಯಲ್ಲಿ 01 ಪುರುಷ, 08 ಮಹಿಳಾ ವಿದ್ಯಾರ್ತಿಗಳು ಸೇರಿದಂತೆ ಒಟ್ಟು 09 ವಿದ್ಯಾರ್ಥಿಗಳು 15 ಸ್ವರ್ಣ ಪದಕಗಳನ್ನು ಪಡೆಯಲಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ 05 ಪುರುಷ, 19 ಮಹಿಳಾ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 24 ವಿದ್ಯಾರ್ಥಿಗಳು 47 ಸ್ವರ್ಣ ಪದಕಗಳನ್ನು ಪಡೆಯಲಿದ್ದಾರೆ ಎಂದು ಡಾ. ಹಲಸೆ ಅವರು ಹೇಳಿದರು.

10033 ವಿದ್ಯಾರ್ಥಿಗಳಿಗೆ ಪದವಿ : ಸ್ನಾತಕ ಹಾಗೂ ಸ್ನಾತಕೋತ್ತರ ಸೇರಿದಂತೆ ಒಟ್ಟು 10033 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ. ಬಿಎ, ಬಿಕಾಂ, ಬಿಬಿಎಂ ಸೇರಿದಂತೆ ವಿವಿಧ ಪದವಿ ವ್ಯಾಸಂಗದಲ್ಲಿ 2018-19 ನೇ ಸಾಲಿನಲ್ಲಿ 5408 ಮಹಿಳೆ, 3033-ಪುರುಷ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 8441 ವಿದ್ಯಾರ್ಥಿಗಳು ಸ್ನಾತಕ ಪದವಿ ಪಡೆಯಲು ಅರ್ಹರಾಗಿದ್ದಾರೆ. ಎಂಎ, ಎಂಕಾಂ, ಎಂಎಸ್‍ಸಿ ಸೇರಿದಂತೆ ವಿವಿಧ ಸ್ನಾತಕೋತ್ತರ ಪದವಿ ವ್ಯಾಸಂಗದಲ್ಲಿ 1073 ಮಹಿಳೆ, 519 ಪುರುಷ ವಿದ್ಯಾರ್ಥಿಗಳು ಸೇರಿದಂತೆ 1592 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆಯಲು ಅರ್ಹರಾಗಿದ್ದಾರೆ. 2018-19 ನೇ ಸಾಲಿನಲ್ಲಿ ಸ್ನಾತಕ ಪದವಿಯಲ್ಲಿ ಶೇ. 56.55 ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇ. 82.87 ರಷ್ಟು ಫಲಿತಾಂಶ ಬಂದಿದೆ ಎಂದರು.

05 ಹೊಸ ಕೋರ್ಸ್‍ಗಳು ಮಂಜೂರು : ದಾವಣಗೆರೆ ವಿವಿ ವ್ಯಾಪ್ತಿಗೆ 2020-21 ನೇ ಸಾಲಿಗಾಗಿ ಕೌಶಲ್ಯ ಭಾರತದಡಿ ಯುಜಿಸಿ ವತಿಯಿಂದ ಒಟ್ಟು 05 ಹೊಸ ಕೋರ್ಸ್‍ಗಳು ಮಂಜೂರಾಗಿವೆ. ವಿವಿ ವತಿಯಿಂದ ಒಟ್ಟು 10 ಹೊಸ ಕೋರ್ಸ್‍ಗಳ ಮಂಜೂರಾತಿಗಾಗಿ ಯುಜಿಸಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಪೈಕಿ 05 ಕೋರ್ಸ್‍ಗಳಿಗೆ ಮಂಜೂರಾತಿ ದೊರೆತಿದೆ. ವಿಶುವಲ್ ಆಟ್ರ್ಸ್ ವಿಭಾಗದಲ್ಲಿ ಡಿಪ್ಲೋಮಾ ಇನ್ ಡಿಜಿಟಲ್ ಆರ್ಟ್, ಬಯೋ ಕೆಮಿಸ್ಟ್ರಿ ವಿಭಾಗದಲ್ಲಿ ಪಿಜಿ ಡಿಪ್ಲೋಮಾ ಇನ್ ಕ್ಲಿನಿಕಲ್ ಅಂಡ್ ಅಪ್ಲೈ ನ್ಯೂಟ್ರಿಷನ್ಸ್. ಜರ್ನಲಿಸಂ ವಿಭಾಗದಲ್ಲಿ ಪಿಜಿ ಡಿಪ್ಲೋಮಾ ಇನ್ ಡಿಜಿಟಲ್ ಜರ್ನಲಿಸಂ. ಎಂ.ಬಿ.ಎ ವಿಭಾಗದಲ್ಲಿ ಬ್ಯಾಚುಲರ್ ಆಫ್ ವೊಕಲ್ ಕೋರ್ಸ್‍ನಡಿ ಇನ್ ರಿಟೇಲ್ ಮಾರ್ಕೆಟಿಂಗ್. ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಮಾಸ್ಟರ್ ಆಫ್ ವೋಕಲ್ ಕೋರ್ಸ್‍ನಡಿ ಸೈಬರ್ ಸೆಕ್ಯುರಿಟಿ ವಿಷಯಗಳು ಮಂಜೂರಾಗಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕುಲಸಚಿವರು (ಪ್ರಸಾರಾಂಗ) ಪ್ರೊ. ಅನಿತಾ ಹೆಚ್.ಎಸ್., ಕಾಲೇಜು ಶಿಕ್ಷಣ ಇಲಾಖೆ ಜಂಟಿನಿರ್ದೇಶಕ ವೀರಭದ್ರಯ್ಯ, ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಡಾ. ರಾಮನಾಥ್, ವಿಜಯಲಕ್ಷ್ಮಿ, ಇನಾಯತ್ ಉಲ್ಲಾ, ಡಾ. ವಿ. ಕುಮಾರ್ ಸೇರಿದಂತೆ ವಿವಿ ವಿವಿಧ ವಿಭಾಗಗಳ ಡೀನ್‍ಗಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here