ವಾಡಿ: ಪಟ್ಟಣದ ಸೋನಾಬಾಯಿ ಮಂದಿರದಲ್ಲಿ ನಡೆಯುತ್ತಿರುವ ಶ್ರೀಶೈಲ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಬಾಲವಿಕಾಸ ಮಂದಿರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಗಮ ಪಾಠ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಶುಕ್ರವಾರ ರಸಪ್ರಶ್ನೆ ಸ್ಪರ್ಧೆ ನಡೆಯಿತು. ೫ರಿಂದ ೭ನೇ ತರಗತಿಯ ಮಕ್ಕಳಿಗೆ ಸಂವಿಧಾನ, ವ್ಯಾಕರಣ ಮತ್ತು ಪರಿಸರದ ಕುರಿತ ಪ್ರಶ್ನೆಗಳನ್ನು ಕೇಳುವ ಮೂಲಕ ಸಾಮಾನ್ಯ ಜ್ಞಾನ ಪರೀಕ್ಷೆ ನಡೆಸಲಾಯಿತು.
ಪ್ರಶ್ನೋತ್ತರ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸಿಆರ್‌ಪಿ ಮಲ್ಲಿನಾಥ ಕುನ್ನೂರ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆಗಳೇ ನಮ್ಮ ಜ್ಞಾನವನ್ನು ವೃದ್ಧಿಸಬಲ್ಲವು. ಗೆಲ್ಲಬೇಕು ಎಂಬ ಛಲ ಉಂಟಾಗಿ ಅಭ್ಯಾದ ಆಸಕ್ತಿ ಹಿಟ್ಟಿಸಬಲ್ಲವು. ಮಕ್ಕಳ ಜ್ಞಾನ ವಿಕಸನಕ್ಕೆ ಸಹಪಠ್ಯ ಚಟುವಟಿಕೆಗಳು ಮಹತ್ವದ್ದಾಗಿವೆ. ಶಿಕ್ಷಕರು ಕ್ರೀಯಶೀಲರಾಗಿ ಪಾಠ ಬೋಧನೆ ಮಾಡುವ ಜತೆಗೆ ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಹೆಚ್ಚಿಸಲು ಹಲವು ರೀತಿಯ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಸಾಂಕ್ರಾಮಿಕ ರೋಗ ಕೊರೊನಾ ವೈರಸ್‌ನಿಂದ ಸುರಕ್ಷತೆ ಅನುಸರಿಸಲು ಸರಕಾರ ವಿದ್ಯಾಗಮ ಶಾಲೆಗೆ ಅನುಕೂಲ ಮಾಡಿಕೊಟ್ಟಿದೆ. ಪರಸ್ಪರ ಸ್ಪರ್ಷ ಮಾಡದೆ ದೈಹಿಕ ಅಂತರವನ್ನು ಕಾಪಾಡಿಕೊಂಡು ಮಕ್ಕಳು ಕಲಿಕೆಯಲ್ಲಿ ಪಾಲ್ಗೊಳ್ಳಬೇಕು. ಮಹಾಮಾರಿ ರೋಗಕ್ಕೆ ಲಸಿಕೆ ಲಭ್ಯವಾಗುವ ವರೆಗೂ ಮಾಸ್ಕ್ ಧರಿಸುವುದನ್ನು ನಿಲ್ಲಿಸಬಾರದು. ಸಮಸ್ಯೆಗಳ ಮಧ್ಯೆಯೇ ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆಯಿದ್ದು, ಸಹಕಾರ ಭಾವದಿಂದ ಶಿಕ್ಷಕರ ಪಾಠ ಆಲಿಸಬೇಕು ಎಂದರು.
ಮುಖ್ಯಶಿಕ್ಷಕ ಚಂದ್ರಶೇಖರ ಕಲ್ಲೂರೆ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಗಮ ತರಗತಿ ಶಿಕ್ಷಕ ಶಿವುಕುಮಾರ ಮಲಕಂಡಿ ರಸಪ್ರಶ್ನೆ ಸ್ಪರ್ಧೆಗೆ ವೇದಿಕೆ ಕಲ್ಪಿಸಿದ್ದರು. ಶಿಕ್ಷಕರಾದ ಶಿವಕುಮಾರ ಕೊಳ್ಳಿ, ಸಂತೋಷಕುಮಾರ ಪಾಟೀಲ ಹಾಗೂ ಶರಣಬಸಪ್ಪ ತುಂಗಳ ಸ್ಪರ್ಧೆ ನಡೆಸಿಕೊಟ್ಟರು. ಪೋಷಕರಾದ ಅಯ್ಯಣ್ಣ ಪಾಲ್ಗೊಂಡಿದ್ದರು.