ವಾಡಿ: ಸಮೀಪದ ಇಂಗಳಗಿ ಗ್ರಾಮದ ಜಾನುವಾರುಗಳಿಗೆ ವಿಚಿತ್ರ ರೋಗವೊಂದು ಕಾಡುತ್ತಿದ್ದು, ರೈತರ ಬಹುತೇಕ ದನ ಕರುಗಳು ಕಾಲು ನೋವಿನಿಂದ ಬಳಲುತ್ತಿವೆ. ಗಾಯಗಳಿಂದ ನರಳಾಡುತ್ತಿರುವ ಮೂಕ ಪಶುಗಳ ಅರಣ್ಯರೋಧನ ಹೇಳತೀರದಾಗಿದೆ. ಪಶು ಆರೋಗ್ಯ ಇಲಾಖೆಯ ಚಿಕಿತ್ಸೆ ಮಾತ್ರ ಗಗನಕುಸುಮದಂತಾಗಿದೆ.
ಕಳೆದ ಹಲವು ದಿನಗಳಿಂದ ಇಂಗಳಗಿ ಗ್ರಾಮದ ಜಾನುವಾರುಗಳ ಆರೋಗ್ಯ ಹದಗೆಡುತ್ತಿದೆ. ರೈತನ ಸಂಗಾತಿಗಳಾದ ಎತ್ತು, ಹಸು, ಕರು, ಎಮ್ಮೆ, ಕುರಿಗಳು ಕಾಲು ಬೇನೆಯಿಂದ ನೆಲಕ್ಕೆ ಕುಸಿದು ಬಿದ್ದಿವೆ. ಕೊಟ್ಟಿಗೆಯಿಂದ ಹೊರ ಬರಲು ಸಾಧ್ಯವಾಗದೆ ವಿಪರೀತ ನೋವು ಅನುಭವಿಸುತ್ತಿವೆ. ವಿಶೇಷವಾಗಿ ಕಾಲುಗಳಲ್ಲಿ ವಿಚಿತ್ರ ರೋಗದ ಲಕ್ಷಣಗಳು ಕಾಣಿಸಿಕೊಂಡಿದೆ. ಇದು ಜಾನುವಾರುಗಳ ಅನಾರೋಗ್ಯಕ್ಕೆ ಕಾರಣವಾಗಿದೆ. ಚಿಕಿತ್ಸೆಗಾಗಿ ಪಶು ವೈದ್ಯರನ್ನು ಸಂಪರ್ಕಿಸಿದರೆ ಕ್ಯಾರೆ ಎನ್ನುತ್ತಿಲ್ಲ. ಗ್ರಾಮಕ್ಕೆ ಬಂದು ಜಾನುವಾರುಗಳ ಆರೋಗ್ಯ ಕಾಪಾಡುವಂತೆ ಮನವಿ ಮಾಡಿದರೂ ಪಶು ವೈದ್ಯಾಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಗ್ರಾಮದ ರೈತರು ಆರೋಪಿಸಿದ್ದಾರೆ.
ಜಾನುವಾರುಗಳ ಕಾಲುಬಾಯಿ ರೋಗಕ್ಕೆ ತುತ್ತಾಗಿರುವ ಇಂಗಳಗಿ ಗ್ರಾಮವು ವಾಡಿ ಪಶು ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡುತ್ತದೆ. ಕೇವಲ ೬ ಕಿ.ಮೀ ಅಂತರದಲ್ಲಿರುವ ಈ ಗ್ರಾಮಕ್ಕೆ ಪಶು ವೈದ್ಯರು ಬರುತ್ತಿಲ್ಲ. ನೋವಿನಿಂದ ನರಳುತ್ತಿರುವ ಜಾನುವಾರುಗಳ ಪರಸ್ಥಿತಿ ನೋಡಲಾಗುತ್ತಿಲ್ಲ. ಪಶು ಆಸ್ಪತ್ರೆಯಲ್ಲಿ ಔಷಧ ಕೊರತೆಯಿದೆ, ಹಣ ಕೊಟ್ಟರೆ ಔಷಧ ಖರೀದಿಸಿ ಜಾನುವಾರುಗಳಿಗೆ ಚಿಕಿತ್ಸೆ ನೀಡುತ್ತೇವೆ ಎಂದು ಹೇಳುತ್ತಿರುವ ಸರಕಾರಿ ಪಶು ವೈದ್ಯರು ಪರೋಕ್ಷವಾಗಿ ಲಂಚಕ್ಕೆ ಕೈಚಾಚುತ್ತಿದ್ದಾರೆ.
ಹಣ ಕೊಡದಿದ್ದರೆ ನಾವು ಬರುವುದಿಲ್ಲ ಎಂದು ನೇರವಾಗಿ ಹೇಳುತ್ತಿದ್ದಾರೆ ಎಂದು ಇಂಗಳಗಿ ಗ್ರಾಮದ ಯುವ ಕಾಂಗ್ರೆಸ್ ಮುಖಂಡ ಮಹ್ಮದ್ ಗೌಸ್ ದುದ್ದನಿ ಆರೋಪಿಸಿದ್ದಾರೆ. ಸರಕಾರದ ಉಚಿತ ಪಶು ಆರೋಗ್ಯ ಸೌಲಭ್ಯ ಮಾತ್ರ ರೈತರ ಕೈಗೆ ನಿಲುಕದಂತಾಗಿದ್ದು, ನಮ್ಮೂರಿನ ಜಾನುವಾರುಗಳ ಆರೋಗ್ಯ ಸ್ಥಿತಿ ದಿನೇದಿನೆ ಹದಗೆಡುತ್ತಿದೆ. ಮೇಲಾಧಿಕಾರಿಗಳು ಕೂಡಲೇ ಇಂಗಳಗಿ ಗ್ರಾಮದಲ್ಲಿ ಪಶು ಆರೋಗ್ಯ ಶಿಬಿರ ಆಯೋಜಿಸಲು ಮುಂದಾಗಬೇಕು ಹಾಗೂ ಪಶು ವೈದ್ಯಕೀಯ ಕ್ಷೇತ್ರವನ್ನು ಆವರಿಸಿರುವ ಲಂಚಗುಳಿತನಕ್ಕೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.