ಕಲಬುರಗಿ: ಕೇಂದ್ರ ಮೂರು ಬಿಲ್ ಗಳನ್ನು ಜಾರಿಗೆ ತಂದಿದೆ. ಇವೆಲ್ಲಾ ರೈತರಿಗೆ ಮರಣ ಶಾಸನವಾಗಿ ಪರಿಣಮಿಸಲಿವೆ ಎಂದು ಕೆಪಿಸಿಸಿ ವಕ್ತಾರ ಶಾಸಕರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ಇಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿ ಗೋಷ್ಟಿ ಯಲ್ಲಿ ಮಾತನಾಡಿದ ಅವರು, ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವ್ಯವಹಾರಗಳ ಮಸೂದೆ -2020 ಬೆಲೆ ಖಾತ್ರಿ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ- 2020 ಹಾಗೂ ಅವಶ್ಯವಸ್ತುಗಳ ( ತಿದ್ದುಪಡಿ) ಮಸೂದೆ -2020 ಈ ಮೂರು ಮಸೂದೆಗಳನ್ನು ಯಾವುದೇ ಚರ್ಚೆ ಮಾಡದೇ ಜಾರಿಗೆ ತರಲಾಗಿದೆ. ಇದರಿಂದಾಗಿ ರೈತ ಸಮೂದಾಯ ತೀವ್ರ ಸಂಕಟ ಅನುಭವಿಸಬೇಕಾಗುತ್ತದೆ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಆದಾಯ ದ್ವಿಗುಣಗೊಳಿಸಲಾಗುವುದು, ಡಾ ಸ್ವಾಮಿನಾಥನ್ ವರದಿ ಜಾರಿಗೊಳಿಸಲಾಗುವುದು ಎಂದು ಪ್ರಧಾನಿ ಭರವಸೆ ನೀಡಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಯುಪಿಎ 2 ಅಧಿಕಾರದಲ್ಲಿ 4.3% ಇದ್ದ ರೈತರ ಆದಾಯ ಈಗ 3.1% ಗೆ ಕುಸಿದಿದೆ. ಈ ನಡುವೆ ಮೂರು ಮಸೂದೆಗಳನ್ನು ಜಾರಿಗೆ ತರುವ ಮೂಲಕ ರೈತರ ಬದುಕನ್ನು ದುರ್ಬರಗೊಳಿಸಲಾಗಿದೆ ಎಂದರು.
ಎಂ ಎಸ್ ಪಿಯನ್ನು ಸರಕಾರ ನಿಗದಿ ಮಾಡಲಾಗುತ್ತದೆ. ಕನಿಷ್ಠ ಬೆಂಬಲ ಬಗ್ಗೆ ಈ ನೂತನ ತಿದ್ದುಪಡಿಯಲ್ಲಿ ಎಲ್ಲಿಯೂ ಹೇಳಲಾಗಿಲ್ಲ. ಹಾಗಾದರೆ ರೈತರು ಬೆಳೆದ ಬೆಳೆಗೆ ದರ ನಿಗದಿ ಯಾರು ಮಾಡಬೇಕು.? ಎಪಿಎಂ ಸಿ ಹೊರಗೆ ಧಾನ್ಯ ಮಾರಾಟ ಮಾಡಲು ಅವಕಾಶ ನೀಡಲಾಗಿದೆ ಎಂದು ಸರಕಾರ ಹೇಳುತ್ತದೆ. ಇದರಿಂದಾಗಿ ಎಪಿಎಂಸಿ ವ್ಯವಸ್ಥೆಯೇ ಇದರಿಂದ ಕುಂಠಿತಗೊಳ್ಳಲಿದೆ ಎಂದು ಹೇಳಿದರು.
ಬಿಹಾರದಲ್ಲಿ ಎಪಿಎಂಸಿ ವ್ಯವಸ್ಥೆಯನ್ನೇ ಹಾಳಮಾಡಲಾಗಿದೆ. ಬೇರೆ ರಾಜ್ಯಗಳಲ್ಲಿ ಮೆಕ್ಕೆಜೋಳ ಪ್ರತಿ ಕ್ವಿಂಟಾಲ್ ಗೆ ರೂ (2400) ೨೪೦೦ ಇದ್ದರೆ ಬಿಹಾರದಲ್ಲಿ ಕೇವಲ (1200) ೧೨೦೦ ಗೆ ಮಾರಲಾಗುತ್ತದೆ. ಕೇಂದ್ರದ ರೈತ ವಿರೋಧಿ ಧೋರಣೆ ಖಂಡಿಸಿ ಇದುವರೆಗೆ ಸುಮಾರು 4000 ಕ್ಕೂ ಅಧಿಕ ಪ್ರತಿಭಟನೆಗಳು ನಡೆದಿವೆ. ಇದು ಕೇಂದ್ರ ಸರಕಾರ ರೈತರ ವಿರೋಧಿ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ರಾಜ್ಯದಿಂದ(25) ೨೫ ಎಂಪಿ ಹಾಗೂ ಹಣಕಾಸು ಸಚಿವರೂ ಕೂಡಾ ರಾಜ್ಯದಿಂದಲೇ ಆರಿಸಿಹೋಗಿದ್ದಾರೆ. ಆದರೂ ಯಾರೊಬ್ಬರು ರೈತ ವಿರೋಧಿ ಕಾನೂನು ತಿದ್ದುಪಡಿಗೆ ವಿರೋಧ ಮಾಡಲಿಲ್ಲ. ರಾಜ್ಯದಲ್ಲಿ ಭಾರೀ ಮಳೆಗೆ ಬೆಳೆ ಹಾಳಾಗಿವೆ. ಬ್ರಿಜ್ ಗಳು ರಸ್ತೆಗಳು ಹಾಳಾಗಿವೆ. ಎನ್ ಡಿ ಆರ್ ಎಫ್ ಅಡಿಯಲ್ಲಿ ಬರುತ್ತಿದ್ದ ಪರಿಹಾರ ಇದುವರೆಗೆ ಬಂದಿಲ್ಲ ಎಂದರು.
ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿಯವರು ಕೇಂದ್ರ ರೈತವಿರೋಧಿ ಕಾನೂನುಗಳ ವಿರುದ್ದ ಪಂಜಾಬ್ ಹಾಗೂ ಹರಿಯಾಣ ದಲ್ಲಿ ಪ್ರತಿಭಟನೆ ನಡೆಯುತ್ತಿದೆ. ರೈತ ವಿರೋಧಿ ಕಾನೂನುಗಳನ್ನು ವಿರೋಧಿಸಿ ಸಹಿ ಚಳುವಳಿ ಪ್ರಾರಂಭಿಸಲಿದ್ದು ಇದೇ ೧೦ ರಂದು ಮಂಡ್ಯದಲ್ಲಿ ಉದ್ಘಾಟನೆಯಾಗಲಿದ್ದು ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಆಗಮಿಸಲಿದ್ದಾರೆ. ಅದೇ ರೀತಿ ಕಲಬುರಗಿಯಲ್ಲಿಯೂ ಮಾಡಲಾಗುವುದು. ಒಟ್ಟು 10 ಕೋಟಿ ಸಹಿ ಸಂಗ್ರಹ ಗುರಿ ಹೊಂದಿದ್ದು ಸಂಗ್ರಹಿಸಿದ ಸಹಿಯನ್ನು ರಾಷ್ಟ್ರಪತಿಗಳಿಗೆ ಕಳಿಸಿ ಬಿಲ್ ವಾಪಸ್ ಪಡೆಯಲು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಕೃಷಿ ಸುಧಾರಣೆಗೆ ವಿರೋಧಿಸಿಲ್ಲ ಆದರೆ ರೈತರ ವಿರುದ್ಧದ ಧೋರಣೆಗಳನ್ನು ವಿರೋಧಿಸುತ್ತದೆ. ಎಪಿಎಂಸಿ ನಲ್ಲಿಇರುವ ನ್ಯೂನ್ಯತೆಗಳನ್ನು ಸರಿಪಡಿಸಲಿ ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಲಿ ಆದರೆ ಎಪಿಎಂಸಿಯನ್ನು ದುರ್ಬಲಗೊಳಿಸುವ ಹುನ್ನಾರವನ್ನು ಕಾಂಗ್ರೆಸ್ ವಿರೋಧಿಸುತ್ತದೆ ಹಾಗೂ ಹೋರಾಟ ನಡೆಸುತ್ತದೆ ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಸಿದರು.
ಶಾಸಕರಾದ ಖನೀಜ್ ಫಾತಿಮಾ, ಎಂಎಲ್‌ಸಿ ಚಂದ್ರಶೇಖರ್, ಡಿಸಿಸಿ ಅಧ್ಯಕ್ಷರಾದ ಜಗದೇವ, ಎಂಎಲ್‌ಸಿ ಅಭ್ಯರ್ಥಿ ಶರಣಪ್ಪ ಮಟ್ಟೂರು, ಗುತ್ತೇದಾರ, ಕೆ.ಬಿ.ಶಾಣಪ್ಪ, ತಿಪ್ಪಣ್ಣಪ್ಪ ಕಮಕನೂರು, ಶರಣಪ್ಪ ಮಾನೇಗಾರ್, ಸುಭಾಷ್ ರಾಠೋಡ್, ವಿಜಯಕುಮಾರ ಜಿ ರಾಮಕೃಷ್ಣ ಸೇರಿದಂತೆ ಮತ್ತಿತರಿದ್ದರು.