ಕಲಬುರಗಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಕಲಬುರಗಿ ಜಿಲ್ಲೆಯಲ್ಲಿ ಅಕ್ಟೋಬರ್ 13 ರಿಂದ 16ರ ವರೆಗೆ ಧಾರಕಾರ ಮಳೆ ಸುರಿಯುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನದಿ ದಂಡೆಯಲ್ಲಿರುವ ಸಾರ್ವಜನಿಕರು ಎಚ್ಚರಿಕೆಯಿಂದಿರುವಂತೆ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಮನವಿ ಮಾಡಿದ್ದಾರೆ.
ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಕೂಡಾ ಹೆಚ್ಚಿನ ಮಳೆ ಆಗುವ ಸಂಭವವಿದ್ದು, ಭೀಮಾ ನದಿಯಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇರುತ್ತದೆ. ಇದಲ್ಲದೆ ಜಿಲ್ಲೆಯ ಜಲಾಶಯಗಳಿಗೆ ಒಳ ನೀರಿನ ಹರಿವು ಹೆಚ್ಚಾಗಿದ್ದು, ಮುಂಜಾಗ್ರತಾ ಕ್ರಮವಾಗಿ ನೀರು ನದಿಗೆ ಹರಿಬಿಡಲಾಗುತ್ತಿದೆ.
ಹೀಗಾಗಿ ಜಲಾಶಯ ಮತ್ತು ಜಲಾಶಯ ಕಾಲುವೆಗಳ ದಂಡೆಯಲ್ಲಿ ಬರುವ ಗ್ರಾಮಗಳ ಗ್ರಾಮಸ್ಥರು ನದಿಯ ದಂಡೆಗೆ ಹೋಗದಂತೆ ಹಾಗೂ ನದಿ ದಂಡೆಯಲ್ಲಿ ಬಟ್ಟೆಯನ್ನು ಒಗೆಯುವುದಾಗಲಿ, ವಾಹನಗಳನ್ನು ತೊಳೆಯುವುದಾಗಲಿ ಹಾಗೂ ಮಕ್ಕಳು ಈಜಾಡದಂತೆ ಎಚ್ಚರಿಕೆ ವಹಿಸಬೇಕು. ಇದಲ್ಲದೆ ತಮ್ಮ ಜಾನುವಾರುಗಳನ್ನು ಸಹ ನದಿಯ ದಂಡೆಗೆ ಬಿಡಬಾರದು ಎಂದು ಅವರು ಸಾರ್ವಜನಿಕರಲ್ಲಿ ಕೋರಿದ್ದಾರೆ.
ಯಾವುದೇ ತುರ್ತು ಸಂಪರ್ಕಕ್ಕಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಹಾಯವಾಣಿ ಸಂಖ್ಯೆ: 1077, ದೂರವಾಣಿ ಸಂಖ್ಯೆ: 08472-278677, 9448557713 ಹಾಗೂ 8951222125 ಗೆ ಸಂಪರ್ಕಿಸುವಂತೆ ಡಿ.ಸಿ. ವಿ.ವಿ.ಜ್ಯೋತ್ಸ್ನಾ ಅವರು ತಿಳಿಸಿದ್ದಾರೆ.