ಕಲಬುರಗಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಕಲಬುರಗಿ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ನಿರಾಶ್ರಿತಗೊಂಡ ಜನರಿಗೆ ಜಿಲ್ಲೆಯಾದ್ಯಂತ 48 ಕಾಳಜಿ ಕೇಂದ್ರ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.
ಕಲಬುರಗಿ, ಕಮಲಾಪೂರ ಹಾಗೂ ಅಫಜಲಪುರ ತಾಲೂಕಿನಲ್ಲಿ ತಲಾ 3, ಆಳಂದ ತಾಲೂಕಿನಲ್ಲಿ 4, ಜೇವರ್ಗಿ ತಾಲೂಕಿನಲ್ಲಿ 1, ಚಿತ್ತಾಪುರ ಮತ್ತು ಸೇಡಂ ತಾಲೂಕಿನಲ್ಲಿ ತಲಾ 5, ಶಹಾಬಾದ ತಾಲೂಕಿನಲ್ಲಿ 4, ಕಾಳಗಿ ತಾಲೂಕಿನಲ್ಲಿ 8 ಹಾಗೂ ಚಿಂಚೋಳಿ ತಾಲೂಕಿನಲ್ಲಿ 12 ಸೇರಿದಂತೆ ಒಟ್ಟಾರೆ 48 ಕಾಳಜಿ ಕೇಂದ್ರ ತೆರೆದು 7603 ಜನರಿಗೆ ಆಶ್ರಯ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬುಧವಾರ ರಾತ್ರಿ 8 ಗಂಟೆ ವರೆಗಿನ ಅಂದಾಜಿನ ಪ್ರಕಾರ ಜಿಲ್ಲೆಯ 4819 ಮನೆಗಳಿಗೆ ಪ್ರವಾಹದ ನೀರು ನುಗ್ಗಿ ಬಟ್ಟೆ-ಪಾತ್ರೆಗಳು ಹಾನಿಗೊಳಗಾಗಿವೆ. 1058 ಮನೆಗಳಿಗೂ ಭೀಕರ ಮಳೆ ಹಾನಿ ಮಾಡಿದೆ. ಇದಲ್ಲದೆ 518 ಜಾನುವಾರಗಳ ಜೀವ ಹಾನಿ ಬಗ್ಗೆಯೂ ವರದಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
77 ಜನರ ರಕ್ಷಣೆ: ಭೀಕರ ಮಳೆಯಿಂದ ಪ್ರವಾಹ ಮತ್ತು ನಡುಗಡ್ಡೆಯಾಗಿ ಗ್ರಾಮ ಮತ್ತು ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಜಿಲ್ಲೆಯ 77 ಜನರನ್ನು ಎನ್.ಡಿ.ಆರ್.ಎಫ್. ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆಯ ತಂಡಗಳು ಸಂರಕ್ಷಿಸಿವೆ. ಜಿಲ್ಲೆಯಲ್ಲಿ ಯಾವುದೇ ಮಾನವ ಪ್ರಾಣ ಹಾನಿ ಸಂಭವಿಸಿಲ್ಲ.
ಚಿತ್ತಾಪೂರ ತಾಲೂಕಿನ ಮಾಲಗತ್ತಿಯಲ್ಲಿ 3, ಶಹಾಬಾದ ಪಟ್ಟಣದ ಜೆ.ಪಿ.ಕಾಲೋನಿ ಪ್ರದೇಶದ 5 ಮತ್ತು ಹಳೆ ಶಹಾಬಾದ ಪ್ರದೇಶದ-6 ಹಾಗೂ ತಾಲೂಕಿನ ಭಂಕೂರ ಗ್ರಾಮದಲ್ಲಿ ಓರ್ವರನ್ನು ರಕ್ಷಿಸಲಾಗಿದೆ. ಸೇಡಂ ತಾಲೂಕಿನಲ್ಲಿ ಸಟಪನಹಳ್ಳಿ ಗ್ರಾಮದಲ್ಲಿ 2 ಮತ್ತು ಮಳಖೇಡ್ ಗ್ರಾಮದಲ್ಲಿ 26 ಜನರನ್ನು ರಕ್ಷಣಾ ತಂಡ ಸಂರಕ್ಷಿಸಿದ್ದಾರೆ.
ಇನ್ನೂ ಚಿಂಚೋಳಿ ತಾಲೂಕಿನ ಗಾರಂಪಳ್ಳಿಯಲ್ಲಿ 13, ಚಿಂಚೋಳಿ ಪಟ್ಟಣ-4 ಐನೊಳ್ಳಿಯಲ್ಲಿ 3 ಹಾಗೂ ಜಟ್ಟೂರು ಗ್ರಾಮದಲ್ಲಿ 14 ಜನರನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾತಿಳಿಸಿದ್ದಾರೆ.