ಕಲಬುರಗಿ: ಜಿಲ್ಲಾದ್ಯಂತ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿ ಹಾಗೂ ಇನ್ನಿತರ ತೊಂದರೆಗಳು ಸಂಭವಿಸಿದ ಪರಿಣಾಮ ತುರ್ತು ಕ್ರಮ ಕೈಗೊಳ್ಳಲು ಮತ್ತು ಪ್ರವಾಹ ಪರಿಸ್ಥಿತಿಯನ್ನು ಪರಿಣಾಮಕಾರಿ ಎದುರಿಸಲು ಅಧಿಕಾರಿಗಳ ಸಭೆ ನಡೆಸಲು ಅನುವು ಮಾಡಿಕೊಡುವಂತೆ ಜಿಲ್ಲಾಧಿಕಾರಿಗೆ ಕೆಪಿಸಿಸಿ ವಕ್ತಾರರೂ ಹಾಗೂ ಚಿತ್ತಾಪುರ ಶಾಸಕರಾದ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.
ಈ ಕುರಿತು ಕಲಬುರಗಿ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಅವರು ಜಿಲ್ಲೆಯಲ್ಲಿ ಅದರಲ್ಲೂ ಚಿತ್ತಾಪುರ ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆ ಬಿದ್ದ ಪರಿಣಾಮ ಹಳ್ಳ ಕೊಳ್ಳ ನದಿಗಳು ತುಂಬಿ ಹರಿಯುತ್ತಿವೆ. ಜೊತೆಗೆ ಮಹಾರಾಷ್ಟ್ರದಿಂದ ಅಪಾರ ಪ್ರಮಾಣದಲ್ಲಿ ನದಿಗೆ ನೀರು ಹರಿಬಿಟ್ಟಿರುವ ಪರಿಣಾಮ ನೀರು ಜಮೀನುಗಳಿಗೆ ಹರಿದು ಬೆಳೆಗಳು ಹಾಳಾಗಿವೆ. ನದಿಪಾತ್ರದ ಗ್ರಾಮಗಳ ಮನೆಗಳಿಗೆ ನೀರು ನುಗ್ಗಿ ಧವಸ ಧಾನ್ಯ ಹಾಳಾಗಿವೆ ಇದರಿಂದಾಗಿ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
” ಈ ಸಂಕಷ್ಟದ ಸಂದರ್ಭದಲ್ಲಿ ನನ್ನ ಕ್ಷೇತ್ರದ ಜನರ ನೆರವಿಗೆ ಧಾವಿಸುವುದು ಒಬ್ಬ ಜವಾಬ್ದಾರಿಯುತ ಶಾಸಕನಾಗಿ ನನ್ನ ಕರ್ತವ್ಯ. ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನೆರೆ ಹಾನಿ ಸಮೀಕ್ಷೆ ನಡೆಸಲು ಹಾಗೂ ಜನರಿಗೆ ಸಹಾಯಹಸ್ತ ಚಾಚಲು ಚುನಾವಣಾ ನೀತಿ ಸಂಹಿತೆ ಅಡ್ಡವಾಗಿದೆ.
ಆದ್ದರಿಂದ, ಪ್ರವಾಹ ಪರಿಸ್ಥಿತಿಗೆ ಸಂಬಂಧಿಸಿದಂತೆ ಮುಂದಿನ ತ್ವರಿತ ಕ್ರಮಗಳಿಗಾಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲು ಹಾಗೂ ಚಿತ್ತಾಪುರ ತಾಲೂಕು ಕಾರ್ಯಲಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಅನುವು ಮಾಡಿಕೊಡಬೇಕು” ಎಂದು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ವಿನಂತಿ ಮಾಡಿದ್ದಾರೆ
ಜಿಲ್ಲಾಧಿಕಾರಿಗಳ ಒಪ್ಪಿಗೆ ದೊರೆತ ನಂತರ, ಕ್ಷೇತ್ರದಲ್ಲಿ ನೆರೆಯಿಂದಾಗಿ ಹಾನಿಯುಂಟಾದ ಪ್ರದೇಶಗಳಿಗೆ ಭೇಟಿ ನೀಡಿ, ಸಮೀಕ್ಷೆ ನಡೆಸಿ, ಪ್ರವಾಹ ನಷ್ಟದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.