ಕಲಬುರಗಿ: ಪ್ರಕೃತಿ ವಿಕೋಪದಿಂದ ಉಂಟಾದ ಅತಿವೃಷ್ಟಿಯು ರೈತರು ಬೆಳೆದ ಉದ್ದು, ತೊಗರಿ, ಕಬ್ಬು, ಎಳ್ಳು ಮುಂತಾದ ಬೆಳೆಗಳನ್ನು ಸಂಪೂರ್ಣವಾಗಿ ಹಾಳು ಮಾಡಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇಷ್ಟಾದರೂ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಈ ಬಗ್ಗೆ ರೈತರಿಗೆ ಕಿಂಚತ್ ಸ್ಪಂದಿಸಿಲ್ಲ. ಹೀಗಾಗಿ ಇದು ಸರ್ಕಾರನಾ? ಇಲ್ಲಿ ಸರ್ಕಾರ ಅಸ್ತಿತ್ವದಲ್ಲಿ ಇದೆಯಾ? ಎನ್ನುವಂತಾಗಿದೆ ಎಂದು ಮಾಜಿ ಸಚಿವ ಎಸ್.ಕೆ. ಕಾಂತಾ ತಿಳಿಸಿದ್ದಾರೆ.
“ಗಾಯದ ಮೇಲೆ ಬರೆ” ಎನ್ನುವಂತೆ ಈಗ ಮಳೆ ಏನೋ ಕಡಿಮೆಯಾಗಿದೆ. ಆದರೆ ಜಿಲ್ಲೆಯ ಭೀಮಾ ಮತ್ತು ಕಾಗಿಣಾ ನದಿಗಳು ಭೋರ್ಗರೆಯುತ್ತಿದೆ. ಮಳೆ ಬಂದು ಮನೆ, ಮನೆಯಲ್ಲಿದ್ದ ದಾಸ್ತಾನು, ಎತ್ತು, ದನಕರಗಳನ್ನು ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ. “ಮೇಲೆ ಮಳೆ ಬಗಲಲ್ಲಿ ಹೊಳೆ”ಯಿಂದಾಗಿ ರೈತ ತೀರಾ ಸಂಕಷ್ಟದಲ್ಲಿ ಮುಳುಗಿದ್ದಾರೆ. ಇಂತಹ ಸಮಯದಲ್ಲಿ ರೈತರ ನೆರವಿಗೆ ಬರಬೇಕಾದ ಸರ್ಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಮ್ಮ ತವರು ಜಿಲ್ಲೆ ಶಿವಮೊಗ್ಗದ ಶಿಕಾರಿಪುರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವುದು ಮುಖ್ಯಮಂತ್ರಿಯವರ ಪ್ರಥಮ ಆದ್ಯತೆ ಯಾವುದಕ್ಕೆ ಎಂಬುದನ್ನು ಮನಗಾಣಿಸುವಂತಿದೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಅನಾವೃಷ್ಟಿಯಿಂದಾಗಿ ಕಳೆದೆರಡು ವರ್ಷಗಳಿಂದ ಸಂಕಷ್ಟದಲ್ಲಿದ್ದ ರೈತ ಈ ಬಾರಿ ಮಳೆ ಉತ್ತಮವಾಗಿದೆ ಎಂದು ಸಂತಸಪಡುವಷ್ಟರಲ್ಲೇ ವಿಪರೀತ ಮಳೆ ಬಂದು ಹೊಲದಲ್ಲಿದ್ದ ಬೆಳೆ ಕಳೆದುಕೊಂಡಿದ್ದಾನೆ. ರೈತನ ಹೆಸರಿನಲ್ಲಿ ಹಸಿರು ಶಾಲು ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಹಾಗೂ ಅವರ ಸರ್ಕಾರದ್ದು ಜನವಿರೋಧಿ ಸರ್ಕಾರ ಎಂದು ಕಿಡಿ ಕಾರಿದ್ದಾರೆ.
ಎಪಿಎಂಸಿ, ಭೂ ಸುಧಾರಣಾ, ಕೈಗಾರಿಕಾ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲು ಹೊರಟಿರುವುದು ರೈತ ಸೇರಿದಂತೆ ಕೃಷಿ-ಕೂಲಿ ಕಾರ್ಮಿಕ ವರ್ಗಕ್ಕೆ ಗಂಡಾಂತರಕಾರಿಯಾಗಿದೆ. ಬಿಜೆಪಿ ಸರ್ಕಾರ ಜನಸಾಮಾನ್ಯರ ಬದುಕುವ ಹಕ್ಕನ್ನೇ ಕಸಿದುಕೊಳ್ಳಲು ಹವಣಿಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಆಡಳಿತ ನಡೆಸುವ ಸರ್ಕಾರದ ಜೊತೆಗೆ ಮಳೆರಾಯ ಕೂಡ ಮುನಿಸಿಕೊಂಡಿರುವುದರಿಂದ ರೈತರ ಬದುಕಿನ ನಿರ್ವಹಣೆ ಕಷ್ಟಕರವಾಗಿದೆ ಎಂದು ಅವರು ವಿವರಿಸಿದ್ದಾರೆ.
ಜಿಲ್ಲೆಯ ಕಲಬುರಗಿ, ಕಮಲಾಪುರ, ಅಫಜಲಪುರ, ಜೇವರ್ಗಿ, ಚಿತ್ತಾಪುರ, ಸೇಡಂ ಮುಂತಾದ ತಾಲ್ಲೂಕುಗಳ ಹಲವು ಹಳ್ಳಿಗಳು ಸಂಪೂರ್ಣ ಜಲಾವೃತಗೊಂಡಿದ್ದು, ಅಲ್ಲಿನ ರೈತಾಪಿ ವರ್ಗ ಅನುಭವಿಸುತ್ತಿರುವ ಸಂಕಟ ನೋಡಿದರೆ ಕರಳು ಕಿತ್ತಿ ಬರುವಂತಿದೆ. ಇಷ್ಟಾದರೂ ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇದನ್ನು ನೋಡಿದರೆ ಕಣ್ಣು, ಕಿವಿ, ಕಾಲು, ಮೂಗು ಇಲ್ಲದ ಈ ಸರ್ಕಾರಕ್ಕೆ ಕನಿಷ್ಠ ಸೌಜನ್ಯ, ಮಾನವೀಯತೆ ಇಲ್ಲ. ಹೃದಯವೂ ಇಲ್ಲ ಎಂದು ಅವರು ಆಪಾದಿಸಿದ್ದಾರೆ.