ಕಲಬುರಗಿ: ೨೦೧೯ನೇ ಸಾಲಿನ ಗುಲಬರ್ಗಾ ವಿಶ್ವವಿದ್ಯಾಲಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ವಿವಿಯ ಪ್ರಸಾರಾಂಗ ನಿರ್ದೇಶಕರಾದ ಪ್ರೊ. ಎಚ್.ಟಿ. ಪೋತೆ ತಿಳಿಸಿದ್ದಾರೆ.
ವಿಶ್ವವಿದ್ಯಾಲಯವು ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕಲಬುರಗಿ ವಿಭಾಗ (ಕಲ್ಯಾಣ ಕರ್ನಾಟಕ ಪ್ರದೇಶದ)ದ ಕನ್ನಡ ಸೃಜನ, ಸೃಜನೇತರ ಲೇಖಕರ ಕೃತಿಗಳಿಗೆ, ಜೀವನ ಕಥನ ಹಾಗೂ ಕನ್ನಡ ಪುಸ್ತಕ ಪ್ರಕಾಶಕರಿಗೆ, ಅನುವಾದ ಲೇಖಕರ ಕೃತಿಗೆ, ಸಮಾಜ ವಿಜ್ಞಾನ, ಜನಪದ ಕಲಾವಿದರಿಗೆ, ಚಿತ್ರ/ಶಿಲ್ಪಕಲಾವಿದರಿಗೆ, ಹಿಂದಿ, ಮರಾಠಿ, ಇಂಗ್ಲಿಷ ಹಾಗೂ ಉರ್ದು ಭಾಷಾ ಲೇಖಕರಿಗೆ ಗೌರವಧನ ನೀಡಿ ಪ್ರೋತ್ಸಾಹಿಸುವುದಲ್ಲದೆ, ರಾಜ್ಯಮಟ್ಟದ ವಿಜ್ಞಾನ ಪುಸ್ತಕ ಮತ್ತು ದಿ. ಜಯತೀರ್ಥ ರಾಜ ಪುರೋಹಿತ ಸ್ಮಾರಕ ರಾಜ್ಯ ಮಟ್ಟದ ಕನ್ನಡ ಸಣ್ಣಕಥಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನೀಡುವ ಬಹುಮಾನ ಫಲತಾಂಶ ಪ್ರಕಟಿಸಿದೆ.
ನವ್ಹೆಂಬರ್ ಕೊನೆಯ ವಾರದಲ್ಲಿ ವಿಶ್ವವಿದ್ಯಾಲಯದ ಕಾರ್ಯಸೌಧದ ’ಮಹಾತ್ಮಾಗಾಂಧಿ ಸಭಾಂಗಣದಲ್ಲಿ’ ಆಚರಿಸಲಿರುವ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕುಲಪತಿಗಳಾದ ಪ್ರೊ. ಚಂದ್ರಕಾಂತ ಯಾತನೂರ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು.
ಮೇಲ್ಕಾಣಿಸಿದ ಕನ್ನಡ ಹಾಗೂ ವಿವಿಧ ಭಾಷಾ ಪುಸ್ತಕ ಲೇಖಕರಿಗೆ, ಜನಪದ ಕಲಾವಿದರಿಗೆ, ಜೀವನ ಕಥನ, ಸಮಾಜ ವಿಜ್ಞಾನ, ಚಿತ್ರಕಲಾವಿದರಿಗೆ, ಪ್ರಕಾಶಕರಿಗೆ ೫೦೦೦/- ರೂಪಾಯಿ ಗೌರವಧನ ಪ್ರಮಾಣ ಪತ್ರ ಹಾಗೂ ಸ್ಮರಣಿಕೆ ಕೊಡಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯಮಟ್ಟದ ವಿಜ್ಞಾನ ಪುಸ್ತಕಕ್ಕೆ ಗೌರವಧನದ ಜೊತೆಗೆ ಸ್ಮರಣಿಕೆ, ಪ್ರಮಾಣ ಪತ್ರ ನೀಡುವುದು ಹಾಗೂ ದಿ. ಜಯತೀರ್ಥ ರಾಜಪುರೋಹಿತ ಸ್ಮಾರಕ ರಾಜ್ಯ ಮಟ್ಟದ ಸಣ್ಣಕಥಾ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತರಿಗೆ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕದೊಂದಿಗೆ ಕ್ರಮವಾಗಿ ತಲಾ ೫೦೦೦/- ೩,೦೦೦/- ಹಾಗೂ ೨,೦೦೦/- ರೂಪಾಯಿ ಗೌರವಧನ ಹಾಗೂ ಸ್ಮರಣಿಕೆ ಕೊಡಲಾಗುವುದು ಎಂದು ಪ್ರೊ. ಪೋತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.