ಶಹಾಬಾದ:ಸ್ಥಳೀಯ ನಗರಸಭೆ ಅಧ್ಯಕ್ಷ ,ಉಪಾಧ್ಯಕ್ಷರ ಆಯ್ಕೆಗೆ ಶನಿವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಂಜಲಿ ಗಿರೀಶ ಕಂಬಾನೂರ ಅಧ್ಯಕ್ಷರಾಗಿ ಹಾಗೂ ಸಲೀಮಾಬೆಗಂ ಮೆಹಬೂಬ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಬೆಳಿಗ್ಗೆ 11 ಗಂಟೆಗೆ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಅಂಜಲಿ ಗಿರೀಶ ಕಂಬಾನೂರ, ಉಪಾಧ್ಯಕ್ಷ ಸ್ಥಾನಕ್ಕೆ ಸಲೀಮಾಬೆಗಂ ಮೆಹಬೂಬ ನಾಮ ಸಲ್ಲಿಸಿದರು.ಅದರಂತೆ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಪಾರ್ವತಿ ಪವಾರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸುಧಾ ಅನೀಲ ನಾಮಪತ್ರಸಲ್ಲಿಸಿದರು.
ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೈ ಎತ್ತುವ ಮೂಲಕ ಮತದಾನ ಮಾಡಲು ತಿಳಿಸಿದರು. ನಗರಸಭೆಯ ಚುನಾವಣೆಯಲ್ಲಿ 27 ಸದಸ್ಯ ಬಲದಲ್ಲಿ ಒಬ್ಬರು ಮರಣ ಹೊಂದಿದ್ದು, 26 ಸದಸ್ಯರು ಪಾಲ್ಗೊಂಡಿದ್ದರು.ಅದರಲ್ಲಿ ಅಧ್ಯಕ್ಷ ಸ್ಥಾನದ ಕಾಂಗ್ರೆಸ್ ಪಕ್ಷದ ವಾರ್ಡ ನಂ. 25ರ ಅಭ್ಯರ್ಥಿ ಅಂಜಲಿ ಗಿರೀಶ ಕಂಬಾನೂರ ಅವರು 22 ಮತಗಳನ್ನು, ಬಿಜೆಪಿಯ ವಾರ್ಡ ನಂ. 9ರ ಅಭ್ಯರ್ಥಿ ಪಾರ್ವತಿ ಪವಾರ ಕೇವಲ ನಾಲ್ಕು ಮತಗಳನ್ನು ಪಡೆದುಕೊಂಡು ಸೋಲನ್ನು ಅನುಭವಿಸಿದರು.ಅದರಂತೆ ಉಪಾಧ್ಯಕ್ಷ ಸ್ಥಾನದ ಕಾಂಗ್ರೆಸ್ ಪಕ್ಷದ 23ರ ಅಭ್ಯರ್ಥಿ ಸಲೀಮಾ ಬೇಗಂ ಮೆಹಬೂಬ ಅವರು 22 ಮತಗಳನ್ನು , ಬಿಜೆಪಿಯ ವಾರ್ಡ ನಂ.11ರ ಅಭ್ಯರ್ಥಿ ಸುಧಾ ಅನೀಲ ಕೇವಲ ನಾಲ್ಕು ಮತಗಳನ್ನು ಪಡೆದುಕೊಂಡು ಸೋಲನ್ನು ಅನುಭವಿಸಿದರು.
ಅಂಜಲಿ ಗಿರೀಶ ಕಂಬಾನೂರ ಅಧ್ಯಕ್ಷರಾಗಿ ಹಾಗೂ ಸಲೀಮಾಬೆಗಂ ಮೆಹಬೂಬ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಆಯುಕ್ತರು ಹಾಗೂ ಸೇಡಂ ಸಹಾಯಕ ಆಯುಕ್ತರಾದ ರಮೇಶ ಕೋಲಾರ ತಿಳಿಸಿದರು. ಒಟ್ಟಾರೆಯಾಗಿ ನಗರಸಭೆ ಅಧ್ಯಕ್ಷ ,ಉಪಾಧ್ಯಕ್ಷರ ಆಯ್ಕೆಗೆ ಶನಿವಾರ ನಡೆದ ಚುನಾವಣೆಯಲ್ಲಿ ಎರಡು ಸ್ಥಾನಗಳು ಕಾಂಗ್ರೆಸ್ ಪಾಲಾಗಿವೆ.
ಈ ಸಂದರ್ಭದಲ್ಲಿ ತಹಸೀಲ್ದಾರ ಸುರೇಶ ವರ್ಮಾ,ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ನಗರಸಭೆಯ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.