ಕಲಬುರಗಿ: ಪೊಲೀಸರು ನಿರಾಶಾವಾದಿಗಳಾಗದೇ ಆಶಾವಾದಿಗಳಾಗಿ ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿರಬೇಕಲ್ಲದೆ ಕಾನೂನು ಸುವ್ಯವಸ್ಥೆ ಜಾರಿಯಲ್ಲಿ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಲು ದಿನದ 24 ಗಂಟೆ ಸಿದ್ಧರಿರಬೇಕು ಎಂದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಅವರು ಹೇಳಿದರು.
ಬುಧವಾರ ಅವರು ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿ ತರಬೇತಿ ಪಡೆಯುತ್ತಿರುವ ಪಿ.ಎಸ್.ಐ., ಆರ್.ಎಸ್.ಐ. ಮತ್ತು ಅಬಕಾರಿ ಉಪನಿರೀಕ್ಷಕ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಪೊಲೀಸ್ ಕರ್ತವ್ಯದ ಸಾಮಾಜಿಕ ಜವಾಬ್ದಾರಿ ನಿರ್ವಹಣೆಯಲ್ಲಿ ಪಿ.ಎಸ್.ಐ. ಸಿವಿಲ್, ನಿಸ್ತಂತು, ಗುಪ್ತವಾರ್ತೆ, ಮೀಸಲು ಪೊಲೀಸ್ ಪಡೆ ಮತ್ತು ಅಬಕಾರಿ ನಿರೀಕ್ಷಕ ಹುದ್ದೆಯವರು ಅವರವರ ವ್ಯಾಪ್ತಿಯಲ್ಲಿ ಸಾಮಾನ್ಯ ಮತ್ತು ದುರ್ಬಲ ಜನರ ಸೇವೆ ಮಾಡುವ ಸದಾವಕಾಶ ಪೊಲೀಸ್ ಇಲಾಖೆಯಿಂದ ನಿಮಗೆ ದೊರೆತಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಎಲ್ಲರನ್ನು ಸಮಾನರಾಗಿ ಕಂಡು ಕಾನೂನು ರಕ್ಷಣೆಯಲ್ಲಿ ತೊಡಗಬೇಕು ಎಂದರು.
ಕೋವಿಡ್-19 ಸೊಂಕಿನಿಂದ ಪಿ.ಟಿ.ಸಿ. ಯಲ್ಲಿ ಓರ್ವ ಅಧಿಕಾರಿ ತಮ್ಮ ಪ್ರಾಣ ತ್ಯಾಗ ಮಾಡಿದ್ದನ್ನು ಸ್ಮರಿಸಿದ ಅವರು ಕೊರೋನಾದಂತಹ ಕಠಿಣ ಪರಿಸ್ಥಿತಿಯಲ್ಲಿ ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುವುದು ಕಷ್ಟಕರವಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ತರಬೇತಿ ಕಾಲೇಜಿನಲ್ಲಿ ಹೆಚ್ಚಿನ ಸಂಖ್ಯೆಯ ಪ್ರಶಿಕ್ಷಣಾರ್ಥಿಗಳು ಒಂದೇ ಸ್ಥಳದಲ್ಲಿ ಸಾಮಾಜಿಕ ಅಂತಹ ಕಾಯ್ದುಕೊಂಡು ಇಲ್ಲಿ ತರಬೇತಿ ನೀಡುತ್ತಿರುವುದಕ್ಕೆ ಪಿ.ಟಿ.ಸಿ. ಕಾರ್ಯನಿರ್ವಹಣೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಈಶಾನ್ಯ ವಲಯದ ಐ.ಜಿ.ಪಿ. ಮನೀಷ್ ಖರ್ಬಿಕರ್, ಕಲಬುರಗಿ ನಗರದ ಪೊಲೀಸ್ ಆಯುಕ್ತ ಎನ್. ಸತೀಶಕುಮಾರ್ ಇದ್ದರು.
ಪೊಲೀಸ್ ತರಬೇತಿ ಮಹಾವಿದ್ಯಾಲಯದ ಪ್ರಾಂಶುಪಾಲ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಸ್ವಾಗತಿಸಿದರು. ಡಿವೈ.ಎಸ್‍ಪಿ ಶಿವಾನಂದ ಪವಾಡಶೆಟ್ಟಿ ವಂದಿಸಿದರು. ಪಿ.ಐ. ಮಹಮ್ಮದ ಗೌಸ್ ನಿರೂಪಿಸಿದರು.
ನಂತರ ಪೊಲೀಸ್ ಮಹಾನಿರ್ದೇಶಕರು ತರಬೇತಿ ಮಹಾವಿದ್ಯಾಲಯದ ನೂತನ ಬ್ಯಾರೇಕ್ಸ್‍ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.