ಲಿಂಗಸ್ಗೂರು: ಕೇಂದ್ರ ಹಾಗೂ ರಾಜ್ಯ ಸರಕಾರಗಳ ರೈತ- ಕಾರ್ಮಿಕ- ಜನ ವಿರೋಧಿ ನೀತಿಗಳ ವಿರುದ್ದ ಕೇಂದ್ರ ಕಾರ್ಮಿಕ ಸಂಘಟನೆಗಳ ನೇತ್ರತ್ವದಲ್ಲಿ ನವೆಂಬರ್ 26ರಂದು ಅಖಿಲ ಭಾರತ ಮಹಾ ಮುಷ್ಕರ ನಡೆಯಲಿದ್ದು, ಅದರ ಯಶಸ್ವಿಗಾಗಿ ನಗರದ ಗುರುಭವನದಲ್ಲಿ ಇಂದು ಜೆಸಿಟಿಯು ಮುಖಂಡರು ಪೂರ್ವಭಾವಿ ಸಭೆ ನಡೆಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಜಂಟಿ ಕಾರ್ಯದರ್ಶಿ ಮಹ್ಮದ್ ಹನೀಫ್ ಕೇಂದ್ರ ಸರ್ಕಾರದ ರೈತ ಕಾರ್ಮಿಕ ವಿರೋಧಿ ಮತ್ತು ಜನ ವಿರೋಧಿ ನೀತಿಗಳನ್ನು ವಿರೋಧಿಸಿ ನಡೆಯುತ್ತಿರುವ ಈ ಅಖಿಲ ಭಾರತ ಸಾರ್ವತ್ರಿಕ ಮುಸ್ಕರಕ್ಕೆ ತಾಲೂಕಿನ ಎಲ್ಲಾ ಕಾರ್ಮಿಕರು, ರೈತರು, ಜನಸಾಮಾನ್ಯರು, ಬೀದಿಬದಿ ವ್ಯಾಪಾರೀಗಳು, ವ್ಯಾಪಾರಸ್ಥರು, ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಯಶಸ್ವಿಗೊಳಿಸಲು ಕರೆ ನೀಡಿದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು ಮಾತನಾಡಿ, ಶಿಕ್ಷಣ, ಆರೋಗ್ಯ, ರೈಲ್ವೇ, ವಿದ್ಯುತ್, ದೂರ ಸಂಪರ್ಕ, ವಿಮಾ, ಬ್ಯಾಂಕ್ ಮುಂತಾದ ಸಾರ್ವಜನಿಕ ವಲಯಗಳನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡಿ ಜನರನ್ನು ಬೀದಿಪಾಲು ಮಾಡಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಶಿಕ್ಷಣ ಸಂಪೂರ್ಣ ಕಾರ್ಪೋರೇಟೀಕರಣಗೊಳ್ಳುವ ಅಪಾಯವಿದ್ದು ಬಡವರು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಆದ್ದರಿಂದ ಎಸ್ಎಫ್ಐ ಈ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದು ವಿದ್ಯಾರ್ಥಿಗಳೂ ಈ ಮುಷ್ಕರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.
ಯುಟಿಯುಸಿಐ ಮುಖಂಡ ವಿರೇಶ್, ಶರಣಪ್ಪ, ಎಐಟಿಯುಸಿ ಮುಖಂಡ ಸಂಗಯ್ಯಸ್ವಾಮಿ, ಮಾತನಾಡಿದರು. ಈ ಸಂದರ್ಭದಲ್ಲಿ ಸಿಐಟಿಯು ಸಂಘಟನೆಯ ಶರಣಮ್ಮ, ಆಟೋ ಯೂನಿಯನ್ ಸಂಘಟನೆಯ ಮುಖಂಡ ಬಾಬಾಜಾನಿ, ಎಐಟಿಯುಸಿಯ ಯಂಕೋಬ ಮಿಯಾಪೂರು, ಕೆಪಿಆರ್ ಎಸ್ ತಾಲೂಕಾಧ್ಯಕ್ಷ ಮಾನಪ್ಪ ಲೆಕ್ಕಿಹಾಳ, ಮುಖಂಡ ಸದ್ದಾ ಹುಸೇನ್, ಕೆಎಸ್ ಆರ್ ಟಿಸಿ ಹಮಾಲಿ, ಬಿಸಿಯೂಟ, ಬಿಸಿಯೂಟ, ಅಂಗನವಾಡಿ, ಬೀದಿಬದಿ ವ್ಯಾಪಾರಿ ಸಂಘಟನೆಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.