ಗುಲ್ಬರ್ಗಾ ವಿವಿಯ 38ನೇ ಘಟಿಕೋತ್ಸವ: 157 ಮಂದಿಗೆ ಪಿ.ಹೆಚ್.ಡಿ, ಪ್ರದಾನ

0
92

ಕಲಬುರಗಿ: ದೇಶದ ಅಭಿವೃದ್ಧಿಯ ಬೆಳವಣಿಗೆ ಸಾಕಾರಗೊಳ್ಳಲು ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ ಅತೀ ಅವಶ್ಯ ಎಂದು ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯ ಪ್ರೊ. ಎಸ್. ಮಾಧೇಶ್ವರನ್ ಅವರು ಪ್ರತಿಪಾದಿಸಿದರು.

ಕಲಬುರಗಿ ವಿಶ್ವವಿದ್ಯಾಲಯದ ಆವರಣದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ವಿವಿಯ 38ನೇ ವಾರ್ಷಿಕ ಘಟಿಕೋತ್ಸವದ ಮುಖ್ಯಅತಿಥಿಗಳಾಗಿದ್ದ ಅವರು, ಬೆಂಗಳೂರಿನಿಂದ ವರ್ಚುವಲಿ ಮೂಲಕ ಭಾಷಣ ಮಾಡಿದರು.

Contact Your\'s Advertisement; 9902492681

ಉನ್ನತ ಶಿಕ್ಷಣದಲ್ಲಿ ಪ್ರವೇಶ ಪಡೆಯುತ್ತಿರುವವರ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗುತ್ತಿರುವಾಗಲೇ ಹಲವಾರು ಅಭಿವೃದ್ಧಿಶೀಲ ದೇಶಗಳು ಅಭಿವೃದ್ಧಿ ಹೊಂದಿದ ದೇಶಗಳ ಸರಿಸಮ ನಿಲ್ಲಲು ಪ್ರಯತ್ನ ಸಾಗಿರುವುದು ಪ್ರಶಂಸನೀಯ ಬೆಳವಣೆಯಾಗಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.

ದೇಶ, ರಾಜ್ಯ ಹಾಗೂ ಸಮಾಜದ ಸಹಜೀವನ ಸಂಬಂಧ ರೂಪಿಸುವಲ್ಲಿ ಜ್ಞಾನವನ್ನು ಸೃಜಿಸುವ ಹಾಗೂ ಪಸರಿಸುವ ಕೇಂದ್ರಗಳಾದ ವಿಶ್ವವಿದ್ಯಾಲಯಗಳು ಅತ್ಯಂತ ಗುರುತರ ಪಾತ್ರ ನಿರ್ವಹಿಸುತ್ತವೆ ಎಂದು ಇದೇ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದಿನ ಕಾಲಘಟ್ಟದಲ್ಲಿ ಶಿಕ್ಷಿತ ಮಾನವ ಶಕ್ತಿಯ ಬೇಡಿಕೆ ಮತ್ತು ಪೂರೈಕೆಯ ಅಂಶದೆಡೆ ಸಮತೋಲನ ಸಾಧಿಸುವ ತುರ್ತು ನೀತಿಯ ಅವಶ್ಯಕತೆ ಇದೆ. ಉನ್ನತ ಶಿಕ್ಷಣಕ್ಕೆ ಅನುಗುಣವಾಗಿ ಉದ್ಯೋಗ ನೀಡಿಕೆ ಸೃಷ್ಟಿಯಾಗಬೇಕು ಎಂದರು.

ಗೌರವ ಡಾಕ್ಟರೇಟ್: ಧಾರ್ಮಿಕ, ಸಾಹಿತ್ಯ, ಶಿಕ್ಷಣ ಹಾಗೂ ಸಾಮಾಜಿಕ ಕಾರ್ಯಗಳನ್ನು ಪರಿಗಣಿಸಿ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯದ ಶ್ರೀಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳರವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಒಟ್ಟು 157 ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಒಟ್ಟಾರೆ 175 ಚಿನ್ನದ ಪದಕಗಳನ್ನು 82 ವಿದ್ಯಾರ್ಥಿಗಳಿಗೆ ಮತ್ತು 04 ಚಿನ್ನದ ಪದಕಗಳನ್ನು 9 ವಿದ್ಯಾರ್ಥಿನಿಯರಿಗೆ ನಗದು ರೂಪದಲ್ಲಿ ವಿತರಿಸಲಾಯಿತು

ಕು: ಜಯಶ್ರೀ ಪ್ರಥಮ: ಕನ್ನಡ ಅಧ್ಯಯನದ ವಿಭಾಗದ ವಿದ್ಯಾರ್ಥಿನಿ ಕು: ಜಯಶ್ರೀ ಶಿವಶರಣಪ್ಪ ಸ್ನಾತಕೋತ್ತರ ಪದವಿಯಲ್ಲಿ 11 ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಪ್ರಾಣಿಶಾಸ್ತ್ರದ ವಿಭಾಗದ ವಿದ್ಯಾರ್ಥಿನಿ ಕು.ಶ್ವೇತಾ ದೊಡ್ಡಮನಿ 10 ಚಿನ್ನದ ಪದಕ ಹಾಗೂ ಎಂ.ಬಿ.ಎ. ವಿಭಾಗದ ವಿದ್ಯಾರ್ಥಿನಿ ಸೌಮ್ಯ ಬಿರಾದಾರ 08 ಚಿನ್ನದ ಪದಕ ಗಳಿಸಿದ್ದಾರೆ.

ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳು ಆದ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ವಿಡಿಯೋ ಸಂದೇಶ ನೀಡಿ, ಭಾಗವಹಿಸದಿರುವುದಕ್ಕೆ ಸ್ಪಷ್ಟನೆ ನೀಡಿದರು.

ಗೌರವ ಡಾಕ್ಟರೇಟ್ ಪದವಿ ಪಡೆಯುತ್ತಿರುವ ಮಂತ್ರಾಲಯದ ಪೀಠಾಧಿಪತಿಗಳಾದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಸೇರಿದಂತೆ ಡಾಕ್ಟರೇಟ್ ಪದವಿ, ಸ್ನಾತಕೋತ್ತರ ಪದವಿ ಹಾಗೂ ಚಿನ್ನದ ಪದಕ ಪಡೆಯುತ್ತಿರುವವರಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಸುಬುಧೇಂದ್ರ ಶ್ರೀಗಳು ಕಾರ್ಯಕ್ರಮದಲ್ಲಿ ಭಾಗವಸಲು ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಶ್ರೀಗಳು ಕುಲಪತಿಗಳಿಗೆ ಕಳುಹಿಸಿದ ಸಂದೇಶ (ರಾಯಸ) ವನ್ನು ಓದಲಾಯಿತು.

ನಾಡಗೀತೆ ಹಾಗೂ ವಿಶ್ವವಿದ್ಯಾಲಯದ ಗೀತೆಗಳನ್ನು ವಿವಿಯ ಸಂಗೀತ ವಿಭಾಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸುಶ್ರಾವ್ಯವಾಗಿ ಹಾಡಿದರು. ಕಾರ್ಯಕ್ರಮಕ್ಕೂ ಮುನ್ನ ಹಾಗೂ ಕಾರ್ಯಕ್ರಮದ ನಂತರ ಘಟಿಕೋತ್ಸವ ಮೆರವಣಿಗೆ ನಡೆಯಿತು.

ವೇದಿಕೆಯಲ್ಲಿ ಕುಲಸಚಿವರಾದ ಪ್ರೊ. ಸಿ. ಸೋಮಶೇಖರ, ಮೌಲ್ಯಮಾಪನ ಕುಲಸಚಿವ ಪ್ರೊ. ಸಂಜೀವಕುಮಾರ ಕೆ.ಎಂ., ಕಲಾನಿಕಾಯದ ಡೀನರಾದ ಪ್ರೊ. ಹೆಚ್.ಟಿ. ಪೋತೆ, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನರಾದ ಪ್ರೊ. ಪಿ.ವಿ. ಹುನಗುಂದ, ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದ ಡೀನರಾದ ಪ್ರೊ. ರಮೇಶ ಅಂಗಡಿ, ಶಿಕ್ಷಣ ನಿಕಾಯದ ಡೀನರಾದ ಪ್ರೊ. ಹೂವಿನಭಾವಿ ಬಾಬಣ್ಣ, ಕಾನೂನು ನಿಕಾಯದ ಡೀನರಾದ ಡಾ. ದೇವಿದಾಸ ಮಾಲೆ, ಸಿಂಡಿಕೇಟ್ ಸದಸ್ಯರು ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರೊಫೇಸರ್‍ಗಳು, ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ಮತ್ತಿತರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here