ಕರೆಯಲಿಲ್ಲ ಶಾಲೆ… ಕರೆಯಿತು ಹೊಲದ ಕೂಲಿ…!: ಬಡ ವಿದ್ಯಾರ್ಥಿಗಳ ಬಾಳಲಿ ಕೊರೊನಾ ಕರಾಳ

0
28

ವಾಡಿ: ಕೊರೊನಾ ಆತಂಕ ಎಂಬುದು ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷವನ್ನು ಸಂಪೂರ್ಣ ನುಂಗಿಹಾಕಿದ್ದು, ಕಲಿಕೆಗೆ ಮುಂದಾಗಬೇಕಿದ್ದ ಮಕ್ಕಳು ಕೃಷಿ ಕೂಲಿಗೆ ಹೋಗುತ್ತಿರುವ ದೇಶ್ಯಗಳು ಸಾಮಾನ್ಯ ಎಂಬಂತಾಗಿವೆ.

ಸಿಮೆಂಟ್ ಉದ್ಯಮ ಹಾಗೂ ಕಲ್ಲು ಗಣಿಗಾರಿಕೆ ನಾಡಾದ ಚಿತ್ತಾಪುರ ತಾಲೂಕಿನ ವಾಡಿ ವಲಯದಲ್ಲಿ ಕೂಲಿ ಕಾರ್ಮಿಕರ ಸಂಖ್ಯೆ ಹೆಚ್ಚಿದ್ದು, ಪೋಷಕರ ಕಾಯಕವನ್ನೇ ಮಕ್ಕಳು ಅನುಸರಿಸುವ ಮೂಲಕ ಬಾಲಕಾರ್ಮಿಕರಾಗುತ್ತಿರುವುದು ದುರಂತವೇ ಸರಿ. ಪ್ರತಿದಿನ ಬೆಳಗ್ಗೆ ಪುಸ್ತಕದ ಚೀಲವನ್ನು ಹೊತ್ತು ಶಾಲೆಯತ್ತ ಹೊರಡುತ್ತಿದ್ದ ಬಡ ಕುಟುಂಬಗಳ ಮಕ್ಕಳು, ರೊಟ್ಟಿ ಬುತ್ತಿ ಕಟ್ಟಿಕೊಂಡು ಕೃಷಿ ಕೆಲಸಕ್ಕೆಂದು ಹೊಲದತ್ತ ಹೊಡುತ್ತಿದ್ದಾರೆ. ದಿನವಿಡೀ ಹೊಲಗಳಲ್ಲಿ ಹತ್ತಿ ಬಿಡಿಸಿ ಹೈರಾಣಾಗುತ್ತಿದ್ದರೂ ಮಕ್ಕಳ ದಯನೀಯ ಸ್ಥಿತಿಗೆ ಮರಗುವವರಿಲ್ಲ.

Contact Your\'s Advertisement; 9902492681

ಕೊರೊನಾ ರೋಗದ ಭಯದ ನೆರಳಿನಲ್ಲಿ ಮಕ್ಕಳ ಅಕ್ಷರ ಭವಿಷ್ಯ ನರಳುತ್ತಿದ್ದು, ಮುಚ್ಚಿದ ಜ್ಞಾನ ದೇಗುಲಕ್ಕೆ ಬೆನ್ನುಮಾಡಿ ಮಕ್ಕಳು ಕೂಲಿ ನೆಚ್ಚಿಕೊಂಡಿರುವುದು ಪರಸ್ಥಿತಿ ಕಲಿಸಿದ ಪಾಠವೇ ಸರಿ. ಆಟೋ, ಟಂಟಂ, ಕ್ರೂಸರ್, ಎತ್ತಿನಗಾಡಿ, ಬೈಕ್, ಟ್ರ್ಯಾಕ್ಟರ್, ಹೀಗೆ ವಿವಿಧ ವಾಹನಗಳನ್ನು ಹತ್ತಿ ಮಕ್ಕಳು ಕೂಲಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಹೆಸರು ಬಿಡಿಸುವ ಕಾರ್ಯದ ನಂತರ ಈಗ ಹತ್ತಿ (ನೂಲು) ಬಿಡಿಸುವ ಕೆಲಸಕ್ಕೆ ಕೂಲಿಕಾರರ ಕೊರತೆ ಎದುರಾಗಿದ್ದು, ಶಾಲೆಯಿಲ್ಲದೆ ಮನೆಯಲ್ಲಿ ಕುಳಿತಿರುವ ಮಕ್ಕಳನ್ನೇ ಕೂಲಿಗಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಮಕ್ಕಳು ಮನೆಯಲ್ಲಿ ಸಮಯ ಕಳೆಯುವುದು ಕಷ್ಟವಾಗಿ ಪೋಷಕರು ತಮ್ಮ ಜತೆಯಲ್ಲಿ ಮಕ್ಕಳನ್ನೂ ಕೆಲಸಕ್ಕೆ ಕರೆದೊಯ್ಯುತ್ತಿದ್ದಾರೆ.

ಶಾಲೆಗಳು ಶುರುವಾದರೆ ಕೊರೊನಾ ಸೊಂಕು ಹರಡುವ ಆತಂಕ ಎದುರಿಸುತ್ತಿರುವ ಸರಕಾರ, ಮಕ್ಕಳ ಆರೋಗ್ಯದ ಕಾಳಜಿ ಪ್ರದರ್ಶಿಸುತ್ತಿದೆ. ಹೊಟ್ಟೆಯ ಹಸಿವಿನ ಕೂಗಿಗೆ ಓಗೊಟ್ಟು ಬದುಕಿನ ಬೆನ್ನುಹತ್ತಿ ದುಡಿಯಲು ಹೊರಟಿರುವ ಬಡ ಕುಟುಂಬಗಳ ಮಕ್ಕಳು, ಬಹುತೇಕ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವವರೇ ಹೆಚ್ಚಾಗಿದ್ದಾರೆ. ವಾಹನಗಳಲ್ಲಿ ಪರಸ್ಪರ ಸ್ಪರ್ಶದಿಂದಲೇ ಪ್ರಯಾಣ ಬೆಳೆಸುತ್ತ ಕಾಯಕದಲ್ಲಿ ತೊಡಗಿರುವವರಿಗೆ ಯಾವ ಆತಂಕವೂ ಇಲ್ಲವಾಗಿದೆ. ಕೊರೊನಾ ಹೆಮ್ಮಾರಿ ಜೀವಕಂಟಕವಾಗಿದೆ. ಒಡಲ ಹಸಿವು ಅದಕಿಂತಲೂ ಕ್ರೂರವಾಗಿದೆ. ಪಾಟಿಚೀಲ ಮನೆಯಲ್ಲಿಟ್ಟು ತುತ್ತಿನ ಚೀಲ ತುಂಬಲು ಮಕ್ಕಳು ಬಾಲಕಾರ್ಮಿಕರಾಗಿದ್ದಂತೂ ಕಹಿ ಸತ್ಯವಾಗಿ ಕಣ್ಮುಂದೆ ನಿಂತಿದ್ದರೂ ಸರಕಾರದ ಯಾವ ಇಲಾಖೆಯೂ ಏನೂಮಾಡಲಾಗದೆ ಅಸಹಾಯಕತೆ ಪ್ರದರ್ಶಿಸುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here