#ಸಿಡಿದೆದ್ದ ರೈತ
ಪಂಜಾಬಿನ ರಣರಗದಲ್ಲಿ ರೈತ ಕಹಳೆ
ಅನ್ನದಾತನ ಎದೆ ಸೀಳಲು ತೂರಿಬಂದಿವೆ
ಸರಕಾರದ ಬಂದೂಕಿನ ಗುಂಡು ಮೊಳೆ
ಸಿಡಿಮದ್ದುಗಳಿಗೆ ಹೆದರಿ ಹಿಂಜರಿಯದೆ
ರಕ್ತದೆಣ್ಣೆಯಲ್ಲಿ ಹಚ್ಚಿದ್ದಾರವರು ಹೋರಾಟದ ದೀಪ
ಆರದಿರಲಿ ಉರಿಯುತ್ತಿರಲಿ ಹೀಗೆ ಕ್ರಾಂತಿಯ ಜ್ವಾಲೆ….
ಸಂಭ್ರಮದ ದೀಪಾವಳಿಯಲ್ಲ ಇದು
ಆಳುವ ಸರ್ಕಾರಗಳ ರಕ್ತದೋಕುಳಿ
ಅನ್ನ ಉತ್ತಿದವರ ಹೆಣ ಉರುಳಿಸಲು ನಿಂತಾರವರು
ಸಾವು ಬೆನ್ನಿಗೆ ಕಟ್ಟಿ ಮಾಡಿ ಮುಗಿಲೆತ್ತರಕ್ಕೆ ಮುಷ್ಠಿ ಕೂಗ್ಯಾರಿವರು
ಆರದಿರಲಿ ಉರಿಯುತ್ತಿರಲಿ ಹೀಗೆ ಕ್ರಾಂತಿಯ ಜ್ವಾಲೆ….
ಜಲಫಿರಂಗಿಯ ಒತ್ತಡದಲ್ಲೂ ಅವರದ್ದು ದಿಟ್ಟ ನಡಿಗೆ
ಗುಂಡುಗಳು ತೂರಿ ಬಂದರೂ
ಹೆದರದೆ ನುಗ್ಗಿ ಬಂದ ಧೀರರವರು
ಧಿಕ್ಕಾರದ ಘೋಷಣೆಯೇ ಶಕ್ತಿ ಅವರಿಗೆ
ನೀರಲಿ ನೆಂದರೂ ನಡುಗದೆ ಗುಡುಗಿದ ನೇಗಿಲ ಯೋಗಿಗಳು
ಹಚ್ಚಿದ್ದಾರೆ ಹೋರಾಟದ ಹಣತೆ
ಆರದಿರಲಿ ಉರಿಯುತ್ತಿರಲಿ ಹೀಗೆ ಕ್ರಾಂತಿಯ ಜ್ವಾಲೆ…
ಇಂದಲ್ಲ ನಾಳೆ ಸಾವು ಬಂದೇ ಬರುತ್ತದೆ
ಹಿಂದೆ ಸರಿಯುವ ಮಾತೇಕೆ ?
ಆಳುವವರ ರೂಪದಲ್ಲಿ ಮುಂದಿದ್ದಾರೆ ಶೋಷಕರು
ರಕ್ಷಣೆಯ ನೆಪದಲ್ಲಿ ಬೆವರಿನ ನೆತ್ತರು ಹೀರುವ ಖಾಕಿಗಳು
ಅನ್ಯಾಯ ಕೇಕೆ ಹಾಕುತ್ತಿರುವಾಗ ಅಂಜುವುದೇಕೆ ಅಳಕುವುದೇಕೆ ?
ನಿಮ್ಮ ದನಿಗೆ ನಮ್ಮ ದನಿಯ ಸೇರಿಸಿ ಸಿಡಿಯೋಣ
ಇತಿಹಾಸ ಬರೆದು ಹುತಾತ್ಮರಾಗೋಣ…
–ಮಡಿವಾಳಪ್ಪ ಹೇರೂರ
ವಾಡಿ (ಜಂಕ್ಷನ್) 9845238667
ಕಲಬುರಗಿ ಜಿಲ್ಲೆ