ಕಲಬುರಗಿ: ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ಭಂಪರ ತೊಗರಿ ಫಸಲು, ನಕಲಿ ಕೀಟನಾಶಕ ತೈಲ ಬಳಕೆಯಿಂದ ಹೂ ಕಾಯಿ ಸಂಪೂರ್ಣ ಭಸ್ಮಗೊಂಡು ರೈತ ಕಂಗಾಲಾದ ಘಟನೆ ನಡೆದಿದೆ.
ಚಿತ್ತಾಪುರ ತಾಲೂಕಿನ ನಾಲವಾರ ವಲಯದ ಯಾಗಾಪುರ ಗ್ರಾಪಂ ವ್ಯಾಪ್ತಿಯ ಹೀರಾಮಣಿ ತಾಂಡಾದ ಧಶರಥ ಚವ್ಹಾಣ ಎಂಬ ರೈತನಿಗೆ ಸೇರಿದ ಒಟ್ಟು ೧೮ ಎಕರೆ ತೊಗರಿ ಹೊಲ ನಕಲಿ ಕೀಟನಾಶಕ ತೈಲ ಬಳಕೆಗೆ ಬಲಿಯಾಗಿದೆ. ಸಮೀಪದ ರೈತ ಸಂಪರ್ಕ ಕೇಂದ್ರದಲ್ಲಿ ಕಿಟನಾಶಕ ಸಿಗಲಿಲ್ಲ ಎಂಬ ಕಾರಣಕ್ಕೆ ಮಾರುಕಟ್ಟೆಯ ಆಗ್ರೋ ಕೇಂದ್ರಗಳಿಂದ ದುಬಾರಿ ಬೆಲೆಗೆ ಖರೀದಿಸಿದ ತೈಲ, ರೈತನ ಬದುಕಿನ ಮೇಲೆ ಭಾರಿ ನಷ್ಟದ ಬರೆ ಎಳೆದಿದೆ.
ತನ್ನ ಹೆಸರಿಗಿರುವ ಸ್ವಂತ ಹೊಲದ ಜತೆಗೆ ಸಮಪಾಲಿಗೆ ಹಾಕಿಕೊಂಡ ಹೊಲದ ಬೆಳೆಯೂ ಕೂಡ ಸರ್ವನಾಶವಾಗಿದ್ದು, ಫಸಲು ಕೈಸೇರುವ ಮೊದಲೇ ಮಣ್ಣುಪಾಲಾಗಿದೆ. ತೊಗರಿ ಗಿಡಕ್ಕೆ ಹುಳು ಹತ್ತಬಾರದು ಎಂಬ ಕಾರಣಕ್ಕೆ ರೈತ ಧಶರಥ ಚವ್ಹಾಣ ತೈಲ ಸಿಂಪರಣೆ ಮಾಡಿದ್ದು, ಬೆಳೆ ರಕ್ಷಣೆಯಾಗುವ ಬದಲು ಸಂಪೂರ್ಣ ಒಣಗಿ ನಿಂತಿದೆ. ಒಂದೊಂದೇ ಗಿಡಗಳು ಕಣ್ಣೆದುರಿಗೆ ಉದುರಿ ಬೀಳುತ್ತಿದ್ದದ್ದನ್ನು ಕಂಡು ರೈತ ಗರಬಡಿದಂತಾಗಿದ್ದಾನೆ. ಪರಿಹಾರಕ್ಕಾಗಿ ಗೋಳಾಡುತ್ತಿರುವ ರೈತ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾನೆ.
ತೊಗರಿ ಬೆಳೆ ಹೂಬಿಟ್ಟು ಕಾಯಿ ಕಟ್ಟುತ್ತಿದ್ದಂತೆ ಕೀಟಗಳ ಕಾಟ ಶುರುವಾಗಿದೆ. ತೊಗರಿ ಗಿಡಕ್ಕೆ ನೂರಾರು ಕೀಟ ಪ್ರಭೇದಗಳು ಧಾಳಿಯಿಡುತ್ತಿದ್ದಂತೆ ನೂರಾರು ಖಾಸಗಿ ಕಂಪನಿಗಳಿಗೆ ಸೇರಿದ ವಿವಿಧ ಕೀಟನಾಶಕ ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಇದರಲ್ಲಿ ನಕಲಿ ಯಾವುದು? ಅಸಲಿ ಯಾವುದು ಎಂಬುದನ್ನು ಗುರುತಿಸುವ ಗೋಜಿಗೆ ಹೋಗದೆ ರೈತರು ಮೋಸ ಹೋಗುತ್ತಿದ್ದಾರೆ ಎಂಬುದಕ್ಕೆ ಈ ಯಾಗಾಪುರ ಪ್ರಕರಣ ಸಾಕ್ಷಿಯಾಗಿದೆ.
ಹುಳುಗಳನ್ನು ಕೊಂದು ಬೇಳೆಕಾಳು ರಕ್ಷಿಸುವ ಆತುರದಲ್ಲಿ ಖಾಸಗಿ ಕಂಪನಿಗಳ ವರ್ಣರಂಜಿತ ಪ್ರಚಾರಕ್ಕೋ ಅಥವ ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಕಾರಣಕ್ಕೋ ರೈತರು ನಕಲಿ ಬೀಜ, ಕೀಟನಾಶಕ, ಗೊಬ್ಬರ ಉತ್ಪನ್ನಗಳನ್ನು ಖರೀದಿಸಿ ವಂಚನೆಗೊಳಗಾಗುತ್ತಿದ್ದಾರೆ. ಬೆವರು ಸುರಿಸಿದ ಭೂಮಿಯಲ್ಲೇ ಬೆಳೆ ಮಣ್ಣಾಗಿದ್ದನ್ನು ಕಂಡು ಕಣ್ಣೀರು ಹಾಕುವಂತಾಗಿದೆ ರೈತರ ಪರಸ್ಥಿತಿ.