ಬೀದರ: ಕಳುವು ಮಾಡಿಕೊಂಡು ಹೋಗಿದ್ದ ಆರೋಪಿಯೊಬ್ಬ ಮನ್ನಾಎಖೇಳ್ಳಿ ಪೊಲೀಸ್ ಠಾಣೆಯ ವಿಶೇಷ ಕಾರ್ಯಾಚರಣೆಯಿಂದಾಗಿ ಪತ್ತೆಯಾಗಿದ್ದಾನೆ.
ಪ್ರಕರಣವು ಜರುಗಿ 2 ವರ್ಷಗಳಾಗಿತ್ತು. ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರ ವಿಶೇಷ ಕಾರ್ಯದಿಂದಾಗಿ ಈಗ ಆರೋಪಿ ಪತ್ತೆಯಾಗಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ಅವರು ಪೊಲೀಸ್ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.
ನಿನ್ನೆ ಆರೋಪಿತನಿಂದ ಜಪ್ತಿ ಮಾಡಲಾದ 51,50,000 ರೂಪಾಯಿ ನಗದು ಹಣವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಎಂ.ಬ್ಯಾಕೋಡ್, ಹುಮನಾಬಾದ್ ಪೊಲೀಸ್ ಉಪಾಧೀಕ್ಷ ಸೋಮಲಿಂಗ ಕುಂಬಾರ ಅವರ ಸಮಕ್ಷಮ ಹಣವನ್ನು ಫಿರ್ಯಾದಿತರಾದ ಬಳ್ಳಾರಿಯ ಬಸವೇಶ್ವರ ಕಾಲೋನಿಯ ರಾಜೇಶ ತಂದೆ ಸಿದ್ದಪ್ಪಾ ಬೆಳ್ಳಕ್ಕಿ ಅವರಿಗೆ ಹಿಂದಿರುಗಿಸಲಾಗಿದೆ.
ಈ ಸಮಯದಲ್ಲಿ ಚಿಟಗುಪ್ಪಾ ಸಿಪಿಐ ಶರಣ ಬಸವೇಶ್ವರ, ಮನ್ನಾಎಖೇಳ್ಳಿ ಪಿಎಸ್‍ಐ ಮಡಿವಾಳಪ್ಪಾ ಬಾಗೋಡಿ, ಚಿಟಗುಪ್ಪ ಪಿಎಸ್‍ಐ ಮಹಾಂತೇಶ ಲಂಬಿ ಹಾಗೂ ಸಿಬ್ಬಂದಿ ಹಾಜರಿದ್ದರು.
ಆರೋಪಿತನಿಗೆ ನ್ಯಾಯಾಂಗ ಬಂಧನ: ಆರೋಪಿತನು ಕಳುವು ಮಾಡಿಕೊಂಡು ಹೋದ ನಗದು ಹಣ 71 ಲಕ್ಷ ರೂ.ಗಳಲ್ಲಿ ನಗದು ಹಣ 51,50,000 ರೂ. ಹಾಗೂ ಒಂದು ಬಲೆನೋ ಕಾರ್ ಅಂದಾಜು 5 ಲಕ್ಷ ರೂ.ಬೆಲೆ ಬಾಳುವುದನ್ನು ಆರೋಪಿತನ ವಶದಿಂದ ಜಪ್ತಿ ಮಾಡಿ ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಏನಾಗಿತ್ತು: ದಿನಾಂಕ 10-06-2018 ರಂದು ರಾಜೇಶ ತಂದೆ ಸಿದ್ದಪ್ಪಾ ಬೆಳ್ಳಕ್ಕಿ, ಬಸವೇಶ್ವರ ಕಾಲೋನಿ ಬಳ್ಳಾರಿ ಇವರು ತಮ್ಮ ಇನೋವಾ ಕಾರ್ (ಕೆ.ಎ.-34 ಎನ್-5427)ನಲ್ಲಿ ಬಳ್ಳಾರಿಯಿಂದ ಬೀದರಕ್ಕೆ ಬಂದು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಬೀಜ ಮಾರಾಟ ಮಾಡಿದ ಹಣವನ್ನು ಸಂಗ್ರಹಿಸಿಕೊಂಡು ಮನ್ನಾಎಖೇಳ್ಳಿ ಗ್ರಾಮಕ್ಕೆ ಬಂದು ಮನ್ನಾಎಖೇಳ್ಳಿ ಗ್ರಾಮದ ಡಿಸಿಸಿ ಬ್ಯಾಂಕ್ ಎದುರಗಡೆ ಕಾರು ನಿಲ್ಲಿಸಿ ಸಮೀಪದಲ್ಲಿದ್ದ ರೈತ ಸಂಪರ್ಕ ಕೇಂದ್ರಕ್ಕೆ ಹಣ ಸಂಗ್ರಹಿಸಲು ಹೋಗಿದ್ದಾಗ ಮರಳಿ ಬರುವವರೆಗೆ ಇನ್ನೊವಾ ಕಾರ ಚಾಲಕನಾದ ಮಾರುತಿ ತಂದೆ ರವಿ ಸುಧಾ, ಸಾ.ತುರುವನೂರ, ಜಿ: ಚಿತ್ರದುರ್ಗ ಈತನ ಹತ್ತಿರ ಬ್ಯಾಗದಲ್ಲಿ ನಗದು ಹಣ 71 ಲಕ್ಷ ರೂಪಾಯಿಗಳನ್ನು ಇಟ್ಟಿದ್ದರು.
ರಾಜೇಶ ಅವರು ರೈತ ಸಂಪರ್ಕ ಕೇಂದ್ರದಲ್ಲಿ ಹಣ ಪಡೆದುಕೊಂಡು ಮರಳಿ ಬಂದು ನೋಡಲು ಇನ್ನೊವಾ ಕಾರ ಚಾಲಕ ಮಾರುತಿಯು ಹಣ ಕಳವು ಮಾಡಿಕೊಂಡು ಹೋಗಿದ್ದರು. ಮನ್ನಾಎಖೇಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ರಾಜೇಶ ಅವರು ದೂರು ದಾಖಲಿಸಿದ್ದರು.