ಕಲಬುರಗಿ: ವಚನ ಸಾಹಿತ್ಯದ ಪ್ರೇರಣೆಯಿಂದ ಹುಟ್ಟಿದ ದಾಸ ಸಾಹಿತ್ಯದಲ್ಲಿ ಸಮಾಜಮುಖ ಧೋರಣೆ ಕಂಡು ಬರುತ್ತದೆ. ವ್ಯಾಸಕೂಟ, ದಾಸಕೂಟ ಈ ಎರಡೂ ಪಂಥಗಳು ಕಂಡು ಬರುತ್ತವೆ ಎಂದು ಸಾಹಿತಿ ಡಾ. ಅನ್ನಪೂರ್ಣ ಗಂಗಾಣಿ ಹೇಳಿದರು.
ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ ಭಾನುವಾರ ಸಂಘದ ಕಚೇರಿಯಲ್ಲಿ ೬೫ನೇ ರಾಜ್ಯೋತ್ಸವ ಪ್ರಯುಕ್ತ ವಾರಪೂರ್ತಿ ಪುಸ್ತಕ ಪರಿಚಯ ಮಾಲಿಕೆ ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಸುರೇಶ ಎಲ್. ಜಾಧವ ಅವರು ರಚಿಸಿದ ಹರಿದಾಸ ದೀಪ್ತಿ (ಲೇಖನಗಳ ಸಂಗ್ರಹ) ಪುಸ್ತಕ ಪರಿಚಯ ಮಾಡಿದ ಅವರು, ಆತ್ಮಕ್ಕೆ ಯಾವಕುಲ, ಜೀವ ಯಾವ ಕುಲ, ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ದಿ ಬಿಡು, ಈಸಬೇಕು ಇದ್ದು ಜೈಸಬೇಕು ಎಂದು ಹೇಳಿದ ದಾಸರು ಹಾಗೂ ಮಧ್ವಾಚಾರ್ಯರ ಕೀರ್ತನೆಗಳು ಮನುಕುಲದ ಒಳಿತಿಗಿವೆ ಎಂಬುದನ್ನು ಈ ಕೃತಿಯಲ್ಲಿ ತಿಳಿಸಿದ್ದಾರೆ.
ದಾಸ, ವ್ಯಾಸರ ವಿಶ್ವಮಾನವ ಚಿಂತನೆಗಳೇನಿದ್ದವು ಎಂಬುದನ್ನು ಈ ಕೃತಿಯಲ್ಲಿ ಯಥೇಚ್ಛವಾಗಿ ಕಾಣಬಹುದು. ನಂಬಿಕೆ, ಮೂಢನಂಬಿಕೆಗಳನ್ನು ವಿಡಂಬಿಸಿದ ಹರಿದಾಸರು, ಸಮಾಜಿಕ ಸಮಸ್ಯೆಗಳಿಗೂ ಸ್ಪಂದಿಸಿರುವುದನ್ನು ಈ ಕೃತಿಯಲ್ಲಿ ಕಾಣಬಹುದು ಎಂದು ತಿಳಿಸಿದರು.
ಸದಾ ಫೇಸ್‌ಬುಕ್, ವಾಟ್ಸ್ ಅಪ್ ಗಳ ನಡುವೆ ಮುಳುಗಿರುವ ಯುವ ಜನತೆ ಈ ಭಕ್ತಿ ಸಾಹಿತ್ಯದಲ್ಲಿ ಮಿಂದೇಳಬೇಕು ಎಂದು ಕೃತಿಕಾರರು ತಿಳಿಸುತ್ತಾರೆ. ಸಂಘದ ಉಪಾಧ್ಯಕ್ಷ ಡಾ. ಸ್ವಾಮಿರಾವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ನಿರ್ದೇಶಕ ಡಾ. ವಿಜಯಕುಮಾರ ಪರೂತೆ, ಲೇಖಕ ಡಾ. ಸುರೇಶ ಎಲ್. ಜಾಧವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಚಾಲಕ ಡಾ. ಶರಣಬಸಪ್ಪ ವಡ್ಡನಕೇರಿ ನಿರೂಪಿಸಿ ವಂದಿಸಿದರು. ಎಸ್.ವಿ. ಹತ್ತಿ, ಸೂರ್ಯಕಾಂತ ಸೊನ್ನದ, ಶಿವರಂಜನ್ ಸತ್ಯಂಪೇಟೆ, ಪ.ಮಾನು ಸಗರ, ಎಸ್.ಎಲ್. ಪಾಟೀಲ, ಶಿವಾನಂದ ಮಠಪತಿ ಇತರರಿದ್ದರು.