ಕಲಬುರಗಿ: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಾವನ್ನು ಕಲ್ಯಾಣ ಕರ್ನಾಟಕ ಪ್ರದೇಶದ ೩೭೧ನೇ ಕಲಂ ವಿಶೇಷ ಸ್ಥಾನಮಾನದ ವ್ಯಾಪ್ತಿಗೆ ಸೇರಿಸುವ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿರುವ ಸಮಾಜ ಕಲ್ಯಾಣ ಸಚಿವ ಶ್ರೀರಾಮಲುರವರ ಹೇಳಿಕೆಗೆ ಹೈದ್ರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿ ಬಲವಾಗಿ ಖಂಡಿಸುತ್ತದೆ ಎಂದು ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ತಿಳಿಸಿದ್ದಾರೆ.
ತಮ್ಮ ರಾಜಕಿಯ ಹಿತಾಸಕ್ತಿಗಾಗಿ ಮೊಳಕಾಲ್ಮೂರು ತಾಲ್ಲೂಕು ಬಳ್ಳಾರಿ ಜಿಲ್ಲೆಗೆ ಸೇರಿಸಿ ಅದಕ್ಕೆ ಪೂರಕವಾಗಿ ಕಲ್ಯಾಣ ಕರ್ನಾಟಕದ ೩೭೧ನೇ ಕಲಂ ವ್ಯಾಪ್ತಿಗೆ ಸೇರಿಸುವ ಬಗ್ಗೆ ಸಚಿವ ಶ್ರೀರಾಮಲು ರವರು ಸಂಚು ನಡೆಸಿ ಹೇಳಿಕೆ ನೀಡಿರುವುದು ನಮಗೆ ದಿಗ್ಭ್ರಮೆ ಹುಟ್ಟಿಸಿದೆ. ಐತಿಹಾಸಿಕವಾಗಿ ಹೈದ್ರಾಬಾದ ಕರ್ನಾಟಕ ವ್ಯಾಪ್ತಿಗೆ ಬರುವ ಮೂಲ ವಾರಸುದಾರರಾದ ಬೀದರ, ಕಲಬುರಗಿ, ಯಾದಗಿರ, ಕೊಪ್ಪಳ, ರಾಯಚೂರು ಜಿಲ್ಲೆಗಳು ಮಾತ್ರ ಒಳಪಡುತ್ತವೆ. ಬಳ್ಳಾರಿ ಜಿಲ್ಲೆ ಮೂಲತಃ ಮದ್ರಾಸ ರಾಜ್ಯಕ್ಕೆ ಒಳಪಟ್ಟಿತ್ತು.
ಹಳೇ ಹೈದ್ರಾಬಾದ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆ ಆಗಿನ ಕೇಂದ್ರ ಸರಕಾರ ಭರವಸೆ ನೀಡಿರುವಂತೆ ತೆಲಂಗಾಣ ಮತ್ತು ಮರಾಠವಾಡ ಪ್ರದೇಶಗಳಿಗೆ ೩೭೧ನೇ ಕಲಂನ ವಿಶೇಷ ಸ್ಥಾನಮಾನ ನೀಡಿತ್ತು. ಶ್ರೀಮಂತ ಮೈಸೂರು ರಾಜ್ಯಕ್ಕೆ ಸೇರಿರುವ ಕಾರಣ ಹೈದ್ರಾಬಾದ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನದ ಔಚಿತ್ಯ ಇಲ್ಲವೆಂದು ಕೇಂದ್ರ ಸರಕಾರ ನಮಗೆ ನಿರ್ಲಕ್ಷ ಮಾಡಿತ್ತು. ನಮ್ಮ ನಿರಂತರ ಹೋರಾಟದ ಫಲ ಸ್ವರೂಪ ಹಾಗೂ ಎಲ್ಲಾ ರಾಜಕೀಯ ಪಕ್ಷಗಳ ಇಚ್ಛಾಶಕ್ತಿಯ ಕಾರಣ ೨೦೧೩ ರಲ್ಲಿ ೩೭೧ನೇ ಕಲಂ ತಿದ್ದುಪಡಿಯಾಗಿ ನಮಗೆ ವಿಶೇಷ ಸ್ಥಾನಮಾನ ದೊರಕಿತು.
ಆರಂಭದಲ್ಲಿ ವಿಶೇಷ ಸ್ಥಾನಮಾನದ ಕರಡು ಸಿದ್ಧಪಡಿಸಿದಾಗ ಮೂಲ ಹೈದ್ರಾಬಾದ ರಾಜ್ಯದ ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ ಯಾದಗಿರ ಮಾತ್ರ ಸೇರಿಕೊಂಡಿತ್ತು. ಬಳ್ಳಾರಿ ಇದರಲ್ಲಿ ಇರಲಿಲ್ಲ. ಉನ್ನತ ಮಟ್ಟದ ರಾಜಕೀಯ ಒತ್ತಡದಿಂದ ಕೊನೆ ಗಳಿಗೆಯಲ್ಲಿ ಬಳ್ಳಾರಿ ಜಿಲ್ಲೆ ಹೈ.ಕ. ಪ್ರದೇಶದ ವಿಶೇಷ ಸ್ಥಾನಮಾನದ ವ್ಯಾಪ್ತಿಗೆ ಸೇರಿಸಲಾಯಿತು. ಆ ಸಂದರ್ಭದಲ್ಲಿ ನಾವು ಯಾವುದೇ ಅಪಸ್ವರ ಎತ್ತದೆ ಏನೋ ನಮ್ಮ ಕಂದಾಯ ವಿಭಾಗದಲ್ಲಿ ಬರುತ್ತದೆ ಎಂದು ನಮ್ಮ ಭಾಗದ ಹಿರಿಯ ನಾಯಕರ ಮಾತಿಗೆ ಒಪ್ಪಿಕೊಂಡು ಮೌನವಾಗಿದ್ದೇವೆ. ಆದರೆ, ಸಮಾಜ ಕಲ್ಯಾಣ ಸಚಿವರು ಮೂಲ ಹೈದ್ರಾಬಾದ ಕರ್ನಾಟಕ ಪ್ರದೇಶದ ಜನರಿಗೆ ಅನ್ಯಾಯ ಮಾಡಲು ತಮ್ಮ ರಾಜಕಿಯ ಬೇಳೆ ಬೆಯಿಸಿಕೊಳ್ಳಲು ಮೊಳಕಾಲ್ಮೂರು ತಾಲ್ಲೂಕಾ ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಸೇರಿಸಬೇಕೆಂಬ ತಮ್ಮ ನಿಲುವು ಕೈ ಬಿಡಬೇಕು.
ಮುಖ್ಯಮಂತ್ರಿ ಯಡಿಯೂರಪ್ಪನವರು ಇಂತಹ ಪ್ರಸ್ತಾಪಕ್ಕೆ ತಕ್ಷಣ ತಿರಸ್ಕರಿಸಬೇಕು ಮತ್ತು ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಇಲ್ಲವಾದರೆ ಕಲ್ಯಾಣ ಕರ್ನಾಟಕದ ಮೂಲ ವಾರಸು ಜಿಲ್ಲೆಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸಮಿತಿ ಈ ಮೂಲಕ ಎಚ್ಚರಿಸುತ್ತದೆ. ಅಷ್ಟೇ ಅಲ್ಲದೇ ಈ ಗಂಭೀರ ವಿಷಯದ ಬಗ್ಗೆ ಕಲ್ಯಾಣ ಕರ್ನಾಟಕದ, ಸಚಿವರು, ಸಂಸದರು, ಶಾಸಕರು ಪಕ್ಷಭೇಧ ಮರೆತು ಒಗ್ಗಟ್ಟು ಪ್ರದರ್ಶಿಸಿ ನಮ್ಮ ಅಸ್ತಿತ್ವ ಮತ್ತು ನಮ್ಮ ಪಾಲಿನ ಮೀಸಲಾತಿ ಕಬಳಿಸದಂತೆ ರಕ್ಷಿಸಲು ಮುಂದಾಗಿ ರಾಜಕಿಯ ಇಚ್ಛಾಶಕ್ತಿ ಪ್ರದರ್ಶಿಸಬೇಕೆಂದು ಸಮಿತಿ ಒತ್ತಾಯಿಸುತ್ತದೆ.