ಕಲಬುರಗಿ: ಕಳೆದ ಅಕ್ಟೋಬರ್ ಮಾಹೆಯಲ್ಲಿ ಸುರಿದ ಮಳೆ ಹಾಗೂ ಭೀಕರ ಪ್ರವಾಹದಿಂದ ನೆರೆಹಾನಿಯಾದ ಕಲಬುರಗಿ ಜಿಲ್ಲೆಯ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡವು ಸೋಮವಾರ ಡಿಸೆಂಬರ್ 14 ರಂದು ಭೇಟಿ ನೀಡಲಿದೆ.
ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ (ಎನ್.ಡಿ.ಎಂ.ಎ.) ರಮೇಶಕುಮಾರ ಘಂಟಾ ನೇತೃತ್ವದ ತಂಡದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ವಿಭಾಗದ ನಿರ್ದೇಶಕ ಡಾ. ಭರ್ತೇಂದುಕುಮಾರ್ ಸಿಂಗ್ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ ರಾಜನ್ ಅವರು ಇರಲಿದ್ದಾರೆ.
ಈ ಅಧ್ಯಯನ ತಂಡವು ಬೆಂಗಳೂರಿನಿಂದ ವಿಮಾನದ ಮೂಲಕ ಸೋಮವಾರ ಬೆಳಿಗ್ಗೆ 9.45 ಗಂಟೆಗೆ ಕಲಬುರಗಿಗೆ ವಿಮಾನ ನಿಲ್ದಾಣಕ್ಕೆ ಬರಲಿದೆ. ನೆರೆ ಹಾನಿ ಕುರಿತು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆಯಲಿವೆ.
ತದನಂತರ ತಂಡವು ಕಲಬುರಗಿ ತಾಲೂಕಿನ ಕಪನೂರ ಮತ್ತು ಫರಹತಾಬಾದ್, ಅಫಜಲಪುರ ತಾಲೂಕಿನ ಬಿದನೂರ, ಗೊಬ್ಬರ (ಬಿ), ಚಿಣಮಗೇರಾ, ಆಳ್ಳಗಿ (ಬಿ), ತೆಲ್ಲೂರ ಹಾಗೂ ಜೇವರ್ಗಿ ತಾಲೂಕಿನ ಕೋನ ಹಿಪ್ಪರಗಾ ಸೇತುವೆ ಪ್ರದೇಶಕ್ಕೆ ಭೇಟಿ ನೀಡಿ ಮರಳಿ ಕಲಬುರಗಿಗೆ ಬಂದು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸುವರು.