ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ: ಬಿ.ಎನ್. ಜರಗು

0
43

ಕಲಬುರಗಿ: 14 ವರ್ಷದೊಳಗಿನ ಮಕ್ಕಳನ್ನು ಕೃಷಿ, ಕೈಗಾರಿಕಾ ವಲಯ, ಗ್ಯಾರೇಜ್, ಹೋಟಲ್, ಅಂಗಡಿಗಳು ಸೇರಿದಂತೆ ಅಪಾಯಕಾರಿ ಕ್ಷೇತ್ರದಲ್ಲಿ ಕೆಲಸಕ್ಕೆ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎನ್. ಜರಗು ಹೇಳಿದರು.

ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಬಾಲಕಾರ್ಮಿಕ ನಿರ್ಮೂನಾ ಹಾಗೂ ಪುನರ್ ವಸತಿ ಸಂಘ ಮತ್ತು ಮಕ್ಕಳ ಸಹಾಯವಾಣಿ-೧೦೯೮ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಒಂದು ಕಡೆ ಮಗುವನ್ನು ದೇವರು ನೀಡಿರುವ ವರವೆಂದು ಕರೆಯುವ ನಾವು ಇಂದು ಮಕ್ಕಳನ್ನು ದುಡಿಮೆಯಲ್ಲಿ ಬಳಸಿಕೊಳ್ಳುತ್ತಿರುವುದು ಕಾನೂನಿನ ರೀತಿಯಲ್ಲಿ ಮತ್ತು ಮಾನವಿಯ ದೃಷ್ಟಿಯಿಂದಲೂ ತಪ್ಪು ಎಂದರು.

Contact Your\'s Advertisement; 9902492681

ಮುಗ್ಧ ಮಕ್ಕಳನ್ನು ಕೆಲಸಕ್ಕೆ ಬದಲಾಗಿ ಎಲ್ಲಿಯವರೆಗೆ ಅವರಿಗೆ ಶಿಕ್ಷಣ ಕೊಡಿಸುವಲ್ಲಿ ನಾವು ಮುಂದಾಗುವುದಿಲ್ಲವೋ ಅಲ್ಲಿಯವರೆಗೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಅಸಾಧ್ಯ. ಮೊದಲು ನಾವು ಬದಲಾಗಬೇಕಿದೆ. ಭಾರತ ಸಂವಿಧಾನದಲ್ಲಿ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಪಡೆಯುವ ಹಕ್ಕನ್ನು ನೀಡಲಾಗಿದ್ದು, ಅದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲವೆಂದ ಅವರು ಪ್ರತಿ ಬಾಲಕಾರ್ಮಿಕನನ್ನು ಶಿಕ್ಷಣ ಕೊಡುಸುವಲ್ಲಿ ವೈಯಕ್ತಿಕ ಮುತುವರ್ಜಿ ವಹಿಸಿ ಎಂದು ಕರೆ ನೀಡಿದರು.

ಡಾನ್ ಬಾಸ್ಕೋ ಸಂಸ್ಥೆಯ ನಿರ್ದೇಶಕ ಫಾದರ್ ಸಜಿತ್ ಜಾರ್ಜ್ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಮಕ್ಕಳನ್ನು ತಂದೆ-ತಾಯಿಯವರು ಕಟ್ಟಡ ಕಟ್ಟುವುದರಲ್ಲಿ ಕೂಲಿ ಆಳಾಗಿ ಬಳಸದೇ ಉತ್ತಮ ಶಿಕ್ಷಣ ನೀಡುವ ಮೂಲಕ ಭವ್ಯ ಭಾರತ ನಿರ್ಮಾಣಕ್ಕೆ ಇವರನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು ಬಾಲಕಾರ್ಮಿಕನಿಗೆ ಶಿಕ್ಷಣ ಕೊಡಿಸಿದಲ್ಲಿ, ಆ ಕುಟುಂಬದಲ್ಲಿ ಅಕ್ಷರ ಕಲಿತ ಮೊದಲ ಮಗು ಅವನಾಗುತ್ತಾನೆ ಎಂದರು.
ವಿವಿಧ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿರುವ ಬಾಲಕಾರ್ಮಿಕರ ಮಾಹಿತಿ ಸಂಗ್ರಹಿಸಿ ಅವರನ್ನು ಸಂರಕ್ಷಿಸುವ ಕೆಲಸ ಪೊಲೀಸ್ ಇಲಾಖೆ, ಮಕ್ಕಳ ಸಹಾಯವಾಣಿ ಹಾಗೂ ಶಿಕ್ಷಣ ಇಲಾಖೆ ಸೇರಿಕೊಂಡು ಮಾಡುವುದರ ಮೂಲಕ ಮಕ್ಕಳನ್ನು ಸಂಕಷ್ಟದಿಂದ ಪಾರು ಮಾಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಭಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಬಿ.ಶರಣಪ್ಪ, ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೀನಾ ರಷ್ಮೀ ಡಿಸೋಜಾ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅರುಣಕುಮಾರ ಕಿಣ್ಣಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ ಕಲಬುರಗಿ ಕಟ್ಟಡ ಕಾರ್ಮಿಕ ಕೇಂದ್ರ ವಲಯ ಜಿಲ್ಲಾಧ್ಯಕ್ಷ ಶಂಕರ ಕಟ್ಟಿಸಂಗಾವಿ, ಎ.ಐ.ಟಿ.ಯು.ಸಿ ಅಧ್ಯಕ್ಷ ಪ್ರಭು ಯಳಸಂಗಿ, ಚೈಲ್ಡ್ ಲೈನ್ ನೋಡಲ್ ಕೇಂದ್ರದ ನಿರ್ದೇಶಕ ರೇಣುಕಾ ಗುಬ್ಬೇವಾಡ, ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕ ಆನಂದರಾಜ, ಉಪ ಕಾರ್ಮಿಕ ಆಯುಕ್ತ ಡಾ. ಗಿರೀಶ ಪಾಟೀಲ್, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ, ಡಿವೈ.ಎಸ್.ಪಿ. ಗೋಪಾಂಡೆ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಸಭಿಕರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಇದಲ್ಲದೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಬಾಲಕಾರ್ಮಿಕ ಮಕ್ಕಳಿಗೆ ಸನ್ಮಾನಿಸಲಾಯಿತು. ಆಶಾ ಹೆಗ್ಗಡೆ ನಿರೂಪಿಸಿದರು, ಎನ್.ಸಿ.ಎಲ್.ಪಿ. ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ ವಂದಿಸಿದರು.

ಇದಕ್ಕೂ ಮುನ್ನ ಜಗತ್ ವೃತ್ತದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಏರ್ಪಡಿಸಲಾದ ಜಾಥಾಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎನ್.ಜರಗು ಅವರು ಚಾಲನೆ ನೀಡಿದರು. ಜಾಥಾವು ಕಲಬುರಗಿ ನಗರದ ಜಗತ್ತ ವೃತ್ತದಿಂದ ಆರಂಭಗೊಂಡು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಕೊನೆಗೊಂಡಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here