ವಾಡಿ: ಗೋವುಗಳಲ್ಲಿ ಕೋಟಿ ದೇವರುಗಳನ್ನು ಕಾಣುವ ಹಿಂದೂಗಳಿಗೆ ಕುರಿ ಕೋಳಿಗಳಲ್ಲೇಕೆ ಒಂದೂ ದೇವರು ಕಾಣುವುದಿಲ್ಲ? ಗೋಹತ್ಯೆಗೆ ಮರುಗುವವರು ಕುರಿ ಕೋಳಿ ಮೀನುಗಳು ಮಾಂಸ ಆಹಾರವಾಗುತ್ತಿರುವಾಗ ಕನಿಕರಪಡುವುದಿಲ್ಲ ಏಕೆ? ಗೋವುಗಳು ಖಸಾಯಿಖಾನೆಗೆ ಸಾಗುವುದನ್ನು ತಡೆದು ಸಂಘರ್ಷ ನಡೆಸುವ ಸಂಘದ ಕಾರ್ಯಕರ್ತರು, ನಿತ್ಯ ಸಾವಿರಾರು ಟನ್ ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡುವ ಭಾರತೀಯ ಕಾರ್ಖಾನೆಗಳನ್ನೇಕೆ ಮುಚ್ಚುವ ಶೌರ್ಯ ಪ್ರದರ್ಶಿಸುವುದಿಲ್ಲ? ಗೋಹತ್ಯೆ ನಿಷೇಧಿಸುವಂತೆ ಯಾರೂ ಬೀದಿಗಿಳಿದು ಹೋರಾಡದಿದ್ದರೂ ಸರಕಾರ ಕಾನೂನು ಜಾರಿ ಮಾಡಿದೆ. ನಿರುದ್ಯೋಗಿಗಳು, ಕೃಷಿಕರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು ವಿವಿಧ ಬೇಡಿಕೆಗಳಿಗಾಗಿ ನಿತ್ಯ ಹೋರಾಡುತ್ತಿದ್ದರೂ ಆಳುವವರ ಕಿವಿಗಳು ಕಿವುಡಾಗಿವೆ.
ಹೀಗೆ ಗೋಹತ್ಯೆ ವಿರೋಧಿಸುವವರ ಹಾಗೂ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದ ಬಿಜೆಪಿ ಸರಕಾರದ ವಿರುದ್ಧ ಹಲವು ಪ್ರತಿರೋಧಕ ಪ್ರಶ್ನೆಗಳು ತೂರಿಬಂದದ್ದು ಸಂಚಲನ ಸಾಹಿತ್ಯ-ಸಾಂಸ್ಕೃತಿಕ ವೇದಿಕೆ ಏರ್ಪಡಿಸಿದ್ದ ಬಲಯ ಸಂವಾದದಲ್ಲಿ. ರವಿವಾರ ಕುಂದನೂರ ಗ್ರಾಮದ ಭೀಮಾ ಪರಿಸರದಲ್ಲಿ ಯುವ ಬರಹಗಾರ ರವಿಕುಮಾರ ಕೋಳಕೂರ ಅವರು ಓದಿ ಮಂಡಿಸಿದ ಫ್ರೊ. ಬಿ.ಗಂಗಾಧರಮೂರ್ತಿ ಅವರ ಗೋಹತ್ಯೆ ನಿಷೇಧದ ಸುತ್ತಲಿನ ರಾಜಕೀಯ ಎಂಬ ಕೃತಿಯ ಕುರಿತು ಅರ್ಥಪೂರ್ಣ ಚರ್ಚೆ ನಡೆಯಿತು.
ಗೋವಿನ ಜತೆಗೆ ಭಾವನಾತ್ಮಕ ಸಂಬಂದ ಬೆಸೆಯುವ ಮೂಲಕ ಮುಗ್ದ ಹಿಂದೂ ಯುವಕರನ್ನು ದಾರಿತಪ್ಪಿಸುವ ವ್ಯವಸ್ಥಿತ ಸಂಚು ಕೋಮುವಾದಿ ರಾಜಕಾರಣಿಗಳಿಂದ ನಡೆಯುತ್ತಿದೆ. ಆಹಾರ ಸ್ವಾತಂತ್ರ್ಯದ ಹಕ್ಕು ಕಸಿದು ಗೋಮಾಂಸ ಹತ್ಯೆ ಪ್ರಕರಣವನ್ನು ಎತ್ತಿ ಹಿಡಿಯುವುದರ ಹಿಂದೆ ಕೋಮು ಸೌಹಾರ್ಧತೆ ಕದಡುವ ಷಡ್ಯಂತ್ರ ಅಡಗಿದೆ ಎಂದು ಸಂವಾದದಲ್ಲಿ ಪಾಲ್ಗೊಂಡಿದ್ದ ಬಹುತೇಕ ಸಾಹಿತ್ಯಾಸಕ್ತರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಸಂಚಲನ ಸಾಹಿತ್ಯ ವೇದಿಕೆ ಸಹ ಕಾರ್ಯದರ್ಶಿ ಸಿದ್ದರಾಜ ಮಲಕಂಡಿ ಪ್ರಾಸ್ತಾವಿಕ ಮಾತನಾಡಿದರು. ಸಂಚಲನ ಸಾಹಿತ್ಯ ವೇದಿಕೆಯ ಉಪಾಧ್ಯಕ್ಷ ದೇವಿಂದ್ರ ಕರದಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರವಾಸಿ ಮಾರ್ಗದರ್ಶಿ ಬಿ.ಎಂ.ರಾವೂರ ಅತಿಥಿಗಳಾಗಿದ್ದರು. ವೇದಿಕೆ ಅಧ್ಯಕ್ಷ ವಿಕ್ರಮ ನಿಂಬರ್ಗಾ, ಕಾಶೀನಾಥ ಹಿಂದಿನಕೇರಿ, ವೀರಣ್ಣ ಯಾರಿ, ಶ್ರವಣಕುಮಾರ ಮೊಸಲಗಿ, ಮಲ್ಲಿಕಪಾಷಾ ಮೌಜನ್, ಖೇಮಲಿಂಗ ಬೆಳಮಗಿ ಸೇರಿದಂತೆ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು. ಸುನೀಲ ರಾಠೋಡ ನಿರೂಪಿಸಿದರು. ಸಿದ್ದಯ್ಯಶಾಸ್ತ್ರಿ ನಂದೂರಮಠ ವಂದಿಸಿದರು.
ವಿದೇಶಗಳಿಗೆ ನಿತ್ಯ ನೂರಾರು ಟನ್ ಗೋಮಾಂಸ ರಫ್ತು ಮಾಡುವಲ್ಲಿ ಭಾರತ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ದೇಶದ ವಿವಿಧೆಡೆ ಬಿಜೆಪಿ ಶಾಸಕರು, ಆರ್‌ಎಸ್‌ಎಸ್ ಮುಖಂಡರು ಹಾಗೂ ಹಿಂದೂಗಳ ಮಾಲೀಕತ್ವ ಹೊಂದಿರುವ ಒಟ್ಟು ಎಂಟು ಗೋಮಾಂಸ ರಫ್ತು ಕಾರ್ಖಾನೆಗಳಿವೆ. ಮುಸ್ಲಿಂ ಸಮುದಾಯದ ಹೆಸರುಗಳ ನಾಮಫಲಕ ಹಾಕಿಕೊಂಡು ಬ್ರಾಹ್ಮಣ ಮತ್ತು ಬನಿಯಾ ಜನಾಂಗಕ್ಕೆ ಸೇರಿದ ದೊಡ್ಡ ವ್ಯಾಪಾರಿಗಳೇ ಹೆಚ್ಚು ಗೋಮಾಂಸ ದಂಧೆಯಲ್ಲಿ ತೊಡಗಿದ್ದಾರೆ. -ರವಿಕುಮಾರ ಕೋಳಕೂರ. ಯುವ ಬರಹಗಾರ.