ರೈತರ ಜಾಗೃತಿ ಸಭೆ: ಕರಾಳ ಕೃಷಿ ಮಸೂಧೆ ಹೋರಾಟದಲ್ಲಿ 27 ರೈತರು ಬಲಿ

0
71

ವಾಡಿ: ಕೇಂದ್ರ ಬಿಜೆಪಿ ಸರಕಾರ ಜಾರಿಗೆ ತಂದಿರುವ ಕರಾಳ ಕೃಷಿ ನೀತಿಗಳ ವಿರುದ್ಧ ದಿಲ್ಲಿಯಲ್ಲಿ ಭುಗಿಲೆದ್ದ ನೇಗಿಲ ಯೋಗಿಗಳ ಹೋರಾಟದಲ್ಲಿ ಇದುವರೆಗೂ ಒಟ್ಟು ೨೭ ಜನ ರೈತರು ಬಲಿಯಾಗಿದ್ದಾರೆ. ಹುತಾತ್ಮ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಲೇ ದೇಶದ ರೈತರು ಹೋರಾಡುವ ಪ್ರತಿಜ್ಞೆ ಮಾಡಬೇಕು ಎಂದು ಎಐಡಿಎಸ್‌ಒ ಕಾರ್ಯದರ್ಶಿ ವೆಂಕಟೇಶ ದೇವದುರ್ಗಾ ಕರೆ ನೀಡಿದರು.

ದಿಲ್ಲಿಯಲ್ಲಿ ಕಳೆದ ೨೦ ದಿನಗಳಿಂದ ನಡೆಯುತ್ತಿರುವ ರೈತರ ನಿರಂತರ ಹೋರಾಟವನ್ನು ಬೆಂಬಲಿಸಿ, ಕುಂದನೂರ ಗ್ರಾಮದಲ್ಲಿ ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್‌ಕೆಎಸ್) ಸಂಘಟಿಸಿದ್ದ ರೈತರ ಜಾಗೃತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ನೂತನ ಕೃಷಿ ಮಸೂಧೆಗಳನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟವನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಲು ದೇಶದ ಅನ್ನದಾತರು ಪಣ ತೊಟ್ಟಿದ್ದಾರೆ. ಪರಿಣಾಮ ಪಂಜಾಬ, ಹರಿಯಾಣ, ಉತ್ತರಪ್ರದೇಶ, ರಾಜಸ್ಥಾನ, ಉತ್ತರಖಂಡ, ಛತ್ತೀಸ್‌ಘಡ್, ಮಧ್ಯಪ್ರದೇಶದಿಂದ ಲಕ್ಷೆಪಲಕ್ಷ ರೈತರು ದಿಲ್ಲಿಯತ್ತ ಪ್ರಯಾಣ ಆರಂಭಿಸುತ್ತಿದ್ದಂತೆ ಆಡಳಿತ ಯಂತ್ರ ತನ್ನ ಅಧಿಕಾರ ಬಲದಿಂದ ರೈತರನ್ನು ತಡೆಯಲು ಹರಸಾಹಸ ಮಾಡಿತು. ರೈತರು ದೇಹಲಿ ತಲುಪದಂತೆ ರಸ್ತೆಗಳನ್ನು ಬಗೆದು ನಾಶಪಡಿಸಿತು.

ರಸ್ತೆಗಳಲ್ಲಿ ಗುಂಡಿಗಳನ್ನು ತೋಡಿಸಿತು. ಮಣ್ಣಿನ ಗುಡ್ಡಗಳನ್ನು ನಿರ್ಮಿಸಿತು. ಬ್ಯಾರಿಕೇಡ್‌ಗಳನ್ನು ಹಾಕಿಸಿತು. ಅಡ್ಡಲಾಗಿ ಮುಳ್ಳಿನ ತಂತಿಗಳನ್ನು ಕಟ್ಟಿಸಿತು. ರೈತರು ಇದೆಲ್ಲವನ್ನೂ ಮೀರಿ ಮುನ್ನುಗ್ಗಿದಾಗ ಸಾವಿರಾರು ಜನ ಪೊಲೀಸರನ್ನು ನೇಮಿಸಿ ಅವರ ಮೇಲೆ ಆಕ್ರಮಣ ಎಸಗಿತು. ಅತಿಯಾದ ಚಳಿಯಲ್ಲಿ ಜಲಫಿರಂಗಿ ಮತ್ತು ಅಶ್ರುವಾಯು ಸಿಡಿಸಿ ಹೋರಾಟವನ್ನು ಮುರಿಯಲು ಯತ್ನಿಸಿತು ಎಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸರಕಾರ ರೈತ ನಾಯಕರೊಂದಿಗೆ ೬-೭ ಸುತ್ತಿನ ಮಾತುಕತೆ ನಡೆಸಿದೆ. ಆದರೂ ಈ ರೈತ ವಿರೋಧಿ ಕಾಯ್ದೆಗಳನ್ನು ಕೈಬಿಡಲು ತಯಾರಿಲ್ಲ. ಅಲ್ಲದೆ ರೈತರ ಹೋರಾಟವನ್ನು ಮುರಿಯಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಹೋರಾಟದ ದಿಕ್ಕು ತಪ್ಪಿಸಲು ಎಲ್ಲಾ ಕುತಂತ್ರಗಳನ್ನು ಮಾಡುತ್ತಿದೆ. ಚಳುವಳಿಗೆ ಕಳಂಕ ಹಚ್ಚಲು ಪ್ರಯತ್ನಿಸುತ್ತಿದೆ. ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ರೈತ ಸಂಘಟನೆಗಳು ರಾಷ್ಟ್ರಮಟ್ಟದ ಬಂದ್‌ಗಳು, ರಾಷ್ಟ್ರೀಯ ಹೆದ್ದಾರಿ ತಡೆ, ರ‍್ಯಾಲಿ, ಧರಣಿಗಳನ್ನು ನಡೆಸಿದರೂ ನಾಚಿಕೆಗೇಡಿ ಸರಕಾರ ತನ್ನ ರೈತ ವಿರೋಧಿ ನಿಲುವಿನಿಂದ ಹಿಂದೆ ಸರಿಯುತ್ತಿಲ್ಲ ಎಂದು ದೂರಿದರು.

ಶೋಷಕ ಬಂಡವಾಳಶಾಹಿ ಪರವಾದ ಕಾನೂನುಗಳನ್ನು ಜಾರಿಗೆ ಬರಲು ಬಿಡಬಾರದು. ಹೋರಾಟವೊಂದೇ ನಮಗಿರುವ ಮಾರ್ಗ ಎಂದರು. ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್‌ಕೆಎಸ್) ಮುಖಂಡರು, ಎಸ್‌ಯುಸಿಐ ಪಕ್ಷದ ಕಾರ್ಯಕರ್ತರು, ಎಐಡಿವೈಒ, ಎಐಡಿಎಸ್‌ಒ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here