ಕಲಬುರಗಿ: ರೈತರ ಹಕ್ಕೊತ್ತಾಯ ಗಳಿಗಾಗಿ ನಿರಂತರ ಧರಣಿಯ ಒಂಬತ್ತನೆಯ ದಿನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಅಫಜಲಪುರ ತಾಲ್ಲೂಕು ಕಮಿಟಿಯಿಂದ ಧರಣಿ ಮುಂದುವರೆಸಲಾಯಿತು.
ಪ್ರಾಂತ ರೈತ ಸಂಘದ ಮುಖಂಡರಾದ ಕಾ.ಬಾಬು ಮುಗಳಿ ಇವರು ಮಾತನಾಡುತ್ತಾ ರೈತರ ವಿರೋಧಿ ಕಾಯ್ದೆಗಳು ದೇಶದ ಸರ್ವ ಜನತೆಯ ಅನ್ನ ಕಸಿದುಕೊಳ್ಳುವ ಕಾಯ್ದೆಗಳಾಗಿವೆ. ಬಿಜೆಪಿ ರೈತರ ಮತ್ತು ಸರ್ವ ಜನತೆಯ ವಿರೋಧಿ ಸರಕಾರವಾಗಿದೆ. ಈ ಕೃಷಿ ವಿರೋಧಿ ಮೂರು ಕಾನೂನುಗಳನ್ನು ವಾಪಾಸು ತೆಗೆದುಕೊಳ್ಳಲೇಬೇಕು. ಇಲ್ಲದಿದ್ದರೆ ಹೋರಾಟ ನಿಲ್ಲದು ಎಂದು ಹೇಳಿದರು.
ಶ್ರೀಮಂತ ಬಿರಾದಾರ ಮಾತನಾಡಿ ” ಮೋದಿಜಿ ಅದಾನಿ ಅಂಬಾನಿ ಎಂಬ ಕಾರ್ಪೊರೇಟ್ ಪರವಾಗಿ ಆರ್ಥಿಕ ನೀತಿ ತರಲು ಹೊರಟಿದ್ದಾರೆ. ಈಗಾಗಲೇ ದೇಶದ ಸಂಪತ್ತು ಕಾರ್ಪೋರೆಟ್ ವಶ ಮಾಡಿದ್ದಾರೆ. ಇದು ದೇಶದ್ರೋಹಿ ನಡೆಯಾಗಿದೆ. ಆದ್ದರಿಂದಲೇ ಕೋಟಿಗಟ್ಟಲೇ ರೈತರು ಮತ್ತು ರೈತಪರ ಶಕ್ತಿ ಇಂದು ರಾಜಿರಹಿತವಾದ ಹೋರಾಟ ಮಾಡುತ್ತಿದ್ದಾರೆ. ಮೋದಿಯವರು ರೈತರ ಮಾತು ಕೇಳಬೇಕು. ಕಾರ್ಪೋರೆಟ್ ಮತ್ತು ಆರ್ ಎಸ್ ಎಸ್ ಮಾತು ಕೇಳಿದರೆ ದೇಶ ಸರ್ವನಾಶ ಮಾಡಿದಂತಾಗುವುದು. ಆದ್ದರಿಂದ ಮೂರು ಕೃಷಿ ವಿರೋಧಿ ಕಾಯ್ದೆ ವಾಪಾಸು ತಗೋಬೇಕು ಎಂದು ಆಗ್ರಹಿಸಿದರು.
ಕಾ.ಪಿ.ಕೆ.ತಿವಾರಿ ಹಿರಿಯ ಸಂಗಾತಿ ಇವರು ಮಾತನಾಡುತ್ತ, ” ರೈತರ ಆಂದೋಲನವು ಜನತೆಯ ಆಂದೋಲನವಾಗಿ ಮಾರ್ಪಡಬೇಕು. ಏಕೆಂದರೆ ಈ ಕಾಯ್ದೆಗಳಿಂದ ದೇಶ ಬಹುಸಂಖ್ಯಾತ ಜನರು ಹಸಿವಿನಿಂದ ನರಳುವಂತಾಗುತ್ತದೆ” ಎಂದು ಹೇಳಿದರು.
ಗುರು ಚಾಂದಕೌಟೆ ಇವರು ಮಾತನಾಡುತ್ತ, ರೈತರ ಹಣ ಕಳ್ಳತನ ಮಾಡುವವರೇ ಅಧಿಕಾರದಲ್ಲಿದ್ದರೆ. ಜನರು ಇದನ್ಬು ಅರ್ಥ ಮಾಡಿಕೊಂಡು ದೇಶಪ್ರೇಮಿ ಹೋರಾಟದಲ್ಲಿ ಭಾಗವಹಿಸಬೇಕೆಂದು ಹೇಳಿದರು.
ಅಬ್ದುಲ್ ಹಮೀದ್ ಫರ್ಹಾನ್, ಶ್ರೀಮಂತ ಬಿರಾದಾರ, ಶಿವಲಿಂಗ್ ತೇಲ್ಕರ್ ಗ್ರಾಮ ಪಂಚಾಯತ ಸದಸ್ಯರು, ಕಿರಾಣಾ ಮಚೆಂಟ್ ಅಸೋಸಿಯೇಷನ್ ಕಾರ್ಯದರ್ಶಿ, ಲಕ್ಷ್ಮಣ ಕಟ್ಟಿಮನಿ, ಕೆ ನೀಲಾ, ಅಲ್ತಾಫ್ ಇನಾಂದಾರ್ ಮುಂತಾದವರು ಸಭೆಯನ್ನುದ್ದೇಶಿಸಿ ಮಾತನಾಡಿದರು.