ಸುರಪುರ: ತಾಲೂಕಿನ ಕಿರದಹಳ್ಳಿ ಗ್ರಾಮ ಪಂಚಾಯತಿಯ ಕರವಸೂಲಿ ಕೆಲಸಗಾರನನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕೆಲಸದಿಂದ ವಜಾಗೊಳಿಸಿ ಆದೇಶಿಸಿದರು, ಸಿಇಒ ಅವರ ಆದೇಶ ಗಣನೆಗೆ ತೆಗೆದುಕೊಳ್ಳದೆ ವಜಾಗೊಂಡ ಕರವಸೂಲಿಗಾರನೆ ಕೆಲಸದಲ್ಲಿ ಮುಂದುವರೆದಿರುವುದು ಕಂಡುಬಂದಿದೆ.
ಕಿರದಹಳ್ಳಿ ಗ್ರಾಮ ಪಂಚಾಯತಿಯ ಕರ ವಸೂಲಿಗಾರ ಹುಲಗಪ್ಪ ಎಂಬುವವರು ಕ್ರಿಮಿನಲ್ ಪ್ರಕರಣವೊಂದರಲ್ಲಿ ಜೈಲು ಸೇರಿದ್ದರಿಂದಾಗಿ ಕಳೆದ ೨೦೨೦ರ ಮೇ ೦೨ ರಿಂದ ಸಪ್ಟಂಬರ್ ೨೪ರ ವರೆಗೆ ಅಂದರೆ ನಾಲ್ಕು ತಿಂಗಳು ೨೨ ದಿನಗಳು ಕೆಲಸಕ್ಕೆ ಕಾರಣ ನೀಡದೆ ಗೈರಾಗಿದ್ದರಿಂದಾಗಿ ೨೦೨೦ರ ನವೆಂಬರ್ ೧೨ ರಂದು ಜಿಲ್ಲಾ ಪಂಚಾಯತಿ ಸಿಇಒ ಅವರು ಆದೇಶ ಹೊರಡಿಸಿ ಹುಲಗಪ್ಪ ಅವರನ್ನು ಕೆಲಸದಿಂದ ತೆಗೆದು ಬೇರೆಯವರನ್ನು ನೇಮಿಸಿಕೊಳ್ಳಲು ನಿಯಮಾನುಸಾರ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು ಕೂಡ ಈವರೆಗೆ ಯಾವುದೇ ಕ್ರಮ ಕೈಗೊಳ್ಳದೆ ಕಿರದಹಳ್ಳಿ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಹಾಗು ಅಧಿಕಾರಿಗಳು ಸಿಇಒ ಆದೇಶವನ್ನು ನಿರ್ಲಕ್ಷ್ಯ ತೋರಿದೆ ಎಂದೆ ನಿಸುತ್ತಿದ್ದು, ಕೂಡಲೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಆದೇಶದಂತೆ ಕ್ರಮ ಕೈಗೊಳ್ಳಬೇಕೆಂದು ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸುತ್ತಿದ್ದಾರೆ.
ಈ ಕುರಿತು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸಿಇಒ ಅವರ ಆದೇಶದ ಕುರಿತು ವಿವಿರಣೆ ನೀಡಿ ನಮಗೆ ಇನ್ನೂ ಜಿಲ್ಲಾ ಪಂಚಾಯತಿ ಕಾರ್ಯಾಲಯದಿಂದ ಈವರೆಗೆ ಸಿಇಒ ಅವರ ಆದೇಶ ಪ್ರತಿಯೆ ಬಂದಿಲ್ಲ ಎಂದು ತಿಳಿಸುತ್ತಾರೆ.ಆದರೆ ಜಿಲ್ಲಾ ಪಂಚಾಯತಿ ಸಿಇಒ ಅವರು ಆದೇಶ ಹೊರಡಿಸಿ ೨ ತಿಂಗಳಾದರು ಈವರೆಗೆ ಒಂದು ಆದೇಶ ಪ್ರತಿಯನ್ನು ಜಿಲ್ಲಾ ಪಂಚಾಯತಿ ಕಾರ್ಯಾಲಯದಿಂದ ಸಂಬಂಧಿಸಿದ ತಾಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗೆ ಕಳುಹಿಸದೆ ನಿರ್ಲಕ್ಷ್ಯ ತೋರಿರುವುದು ಈಗ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ.