ಆಳಂದ: ಇತ್ತೀಚಿಗೆ ತಾಲೂಕಿನಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆಂದು ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ ತಿಳಿಸಿದ್ದಾರೆ.
ಚುನಾವಣೆ ಜರುಗಿದ ೩೦ ಗ್ರಾಮ ಪಂಚಾಯತಿಗಳಲ್ಲಿ ಬಿಜೆಪಿ ಬೆಂಬಲಿತರು ೧೧ ಗ್ರಾಮ ಪಂಚಾಯತಗಳಲ್ಲಿ ನಿಚ್ಚಳ ಬಹುಮತ ಪಡೆದಿದ್ದಾರೆ. ಇನ್ನೂ ೧೦ ಗ್ರಾಮ ಪಂಚಾಯತಿಗಳಲ್ಲಿ ನಮ್ಮ ಪಕ್ಷದ ಬಂಡಾಯ ಅಭ್ಯರ್ಥಿಗಳೇ ನಿರ್ಣಾಯಕರಾಗಿ ಗೆಲುವು ಸಾಧಿಸಿದ್ದಾರೆ. ಸ್ವತ: ಅಭ್ಯರ್ಥಿಗಳೇ ಬಂದು ಶಾಸಕರನ್ನು ಸಂಪರ್ಕಿಸಿ ತಾವು ನಿಮ್ಮೊಡನೆ ಇದ್ದೇವೆ ಎಂದು ತಿಳಿಸಿದ್ದಾರೆ ಹೀಗಾಗಿ ಉಳಿದ ೧೦ ಗ್ರಾಮ ಪಂಚಾಯತಿಗಳಲ್ಲಿಯೂ ಬಿಜೆಪಿ ಪಕ್ಷದ ಬೆಂಬಲಿತರೇ ಅಧಿಕಾರಕ್ಕೆ ಬರಲಿದ್ದಾರೆ ಎಂದು ಹೇಳಿದ್ದಾರೆ.
ಸುಳ್ಳು ಸುದ್ದಿಗಳನ್ನು ಹಬ್ಬಿಸುವುದರಲ್ಲಿ ಕಾಂಗ್ರೆಸ್‌ನವರು ನಿಸ್ಸೀಮರಾಗಿದ್ದಾರೆ ಕೇವಲ ೯ ಪಂಚಾಯತಿಗಳಲ್ಲಿ ಅಧಿಕಾರಕ್ಕೆ ಏರಲಿರುವ ಕಾಂಗ್ರೆಸಿಗರು ತಾಲೂಕಿನಲ್ಲಿ ೨೦ ಪಂಚಾಯತಿಗಳಲ್ಲಿ ಅಧಿಕಾರಕ್ಕೆ ಹಿಡಿಯಲಿದ್ದೇವೆ ಎಂದು ಮಾಧ್ಯಮಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಿಬಿಟ್ಟು ಜನರಿಗೆ ತಪ್ಪು ಮಾಹಿತಿ ರವಾನಿಸುತ್ತಿದ್ದಾರೆ ಎಂದು ಹೇಳಿದರು.
ತಾಲೂಕಿನ ಆಳಂಗಾ, ತಡೋಳಾ, ಖಜೂರಿ, ಹೊದಲೂರ, ತಡಕಲ, ಮುನ್ನಹಳ್ಳಿ, ಕಿಣ್ಣಿ ಸುಲ್ತಾನ, ಕೊಡಲ ಹಂಗರ್ಗಾ, ಹೆಬಳಿ, ಸುಂಟನೂರ, ಹಡಲಗಿ ಗ್ರಾಮ ಪಂಚಾಯತಿಗಳಲ್ಲಿ ಬೆಜೆಪಿ ಬೆಂಬಲಿತರು ಸ್ಪಷ್ಟ ಬಹುಮತ ಪಡೆದಿದ್ದಾರೆ.
ಅತಂತ್ರ ಸ್ಥಿತಿ ನಿರ್ಮಾಣವಾದ ಪಂಚಾಯತಿಗಳಲ್ಲಿ ಬೆಂಬಲ ಕೇಳಿದರೆ ತಾವು ಬೆಂಬಲ ನೀಡಲು ಸಿದ್ದ. ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತಿ ಸದಸ್ಯರು ಗ್ರಾಮ ಸ್ವರಾಜ್ಯದ ಆಶಯದಂತೆ ಕಾರ್ಯ ನಿರ್ವಹಿಸಿ ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.