ಕಲಬುರಗಿ: ಭಾರತ ಸಂವಿಧಾನ ಅರ್ಥವಾಗಬೇಕಾದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ-ಹೋರಾಟ-ಚಿಂತನೆಗಳು ಅರ್ಥವಾಗಬೇಕಿದೆ ಎಂಬುದಾಗಿ ಕನ್ನಡದ ಹೆಸರಾಂತ ಕವಿ ಡಾ. ಸಿದ್ಧಲಿಂಗಯ್ಯ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ’ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನ ಕೇಂದ್ರ’ ಹಾಗೂ ’ಸಮಾನ ಅವಕಾಶಗಳ ವಿಶೇಷ ಘಟಕ’ದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತ ಸಂವಿಧಾನ ಕುರಿತ ರಾಷ್ಟ್ರೀಯ ವೆಬಿನಾರನ್ನು ಉದ್ಘಾಟಿಸಿ, ಆಶಯ ಭಾಷಣ ಮಾಡಿದ ಡಾ. ಸಿದ್ಧಲಿಂಗಯ್ಯ ಅವರು : ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಈ ಜಾತಿನಿಷ್ಠ ಸಮಾಜದಲಿ ಅಸ್ಪೃಶ್ಯತೆಯ ಅನುಭವಗಳ ಜೊತೆಗೆ; ಮಾನವೀಯತೆಯ ಅನುಭವವೂ ಸಹಾ ಆಗಿದೆ. ಇವರ ಶಿಕ್ಷರಾದ ಅಂಬೇಡ್ಕರ್ ಅವರು, ತಮ್ಮ ಹೆಸರನ್ನು ಶಿಷ್ಯನಿಗೆ ಅರ್ಪಣೆ ಮಾಡಿದ್ದು ಮಾತ್ರವಲ್ಲದೆ ಅಗಾಧವಾದ ಪ್ರೀತಿ ತೋರುವ ಮೂಲಕ ಶೈಕ್ಷಣಿಕ ಪ್ರಗತಿಯ ಮೇಲೆ ಪ್ರಭಾವ ಬೀರಿದರು. ಇವರ ಹಾಗೆಯೇ ಶಾಹು ಮಹಾರಾಜ, ಸಯ್ಯಾಜಿರಾವ್ ಗಾಯಕವಾಡ, ಅರ್ಜುನ್ ಕೇಳುಸ್ಕರ್ ಮುಂತಾದವರು ಅಂಬೇಡ್ಕರ್ ಅವರ ಉನ್ನತ ಬದುಕಿನ ಹಿಂದೆ ಪ್ರಮುಖ ಪಾತ್ರವಹಿಸಿದ್ದಾರೆ. ರಾಷ್ಟ್ರ ಹಾಗೂ ತನ್ನ ಸಮುದಾಯದ ಹಿತದ ಆಯ್ಕೆಯ ಪ್ರಶ್ನೆ ಬಂದಾಗ ರಾಷ್ಟ್ರದ ಹಿತವನ್ನು ಆಯ್ಕೆ ಮಾಡಿಕೊಂಡ ಅಂಬೇಡ್ಕರ್ ನಿಜ ಅರ್ಥದಲ್ಲಿ ರಾಷ್ಟ್ರಪ್ರೇಮಿ. ಇಂಗ್ಲೇಂಡಿನಲ್ಲಿ ನಡೆದ ದುಂಡುಮೇಜಿನ ಪರಿಷತ್ತಿನಲ್ಲಿ ಹೋರಾಟ ಮಾಡಿ ತನ್ನ ಸಮುದಾಯದ ಏಳ್ಗೆಗಾಗಿ ಪಡೆದಕೊಂಡು ಬಂದಿದ್ದ ವಿಶೇಷ ಮತದಾನದ ಹಕ್ಕನ್ನು, ಪೂನಾ ಒಪ್ಪಂದಕ್ಕೆ ಸಹಿ ಮಾಡುವ ಮೂಲಕ ಬಲಿಕೊಟ್ಟು ಗಾಂಧೀಜಿಯವರ ಪ್ರಾಣ ಉಳಿಸಿದ ಅಂಬೇಡ್ಕರ್ ಅವರು ದೇಶದ ಅಖಂಡತೆಯನ್ನು ಕಾಪಾಡಿದರು. ೧೯೩೩ರಲ್ಲಿ ರಾಜಗೋಪಾಲಚಾರಿ ಅವರು ’ಲಂಡನ್ನಿನ ದುಂಡುಮೇಜಿನ ಸಭೆಯಲ್ಲಿ ನಾವು ಬ್ರಿಟೀಷರ ಮುಂದೆ ಸೋಲಲಿಲ್ಲ, ಬದಲಾಗಿ ಅಂಬೇಡ್ಕರ್ ಅವರ ಮುಂದೆ ಸೋತೆವು’ ಎಂದು ಹೇಳಿದರು.
ಅಂಬೇಡ್ಕರ್ ಅವರ ವ್ಯಕ್ತಿತ್ವದಿಂದ ಪ್ರಭಾವಿತರಾದ ಗಾಂಧೀಜಿಯವರು ಮುಂದೆ ಈ ದೇಶದ ಅಸ್ಪೃಶ್ಯರ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡರು. ಭಾರತಕ್ಕೆ ಸಂವಿಧಾನವನ್ನು ಇಂಗ್ಲೇಂಡಿನ ಸಂವಿಧಾನತಜ್ಞ ಐವರ್‌ಜನ್ ಅವರಿಂದ ಬರೆಸಬೇಕೆಂದು ಹಲವು ಹೇಳಿದಾಗ, ಗಾಂಧೀಜಿಯವರು ಅದನ್ನು ವಿರೋಧಿಸಿ ಅಂಬೇಡ್ಕರ್ ಅವರಿಂದ ಭಾರತ ಸಂವಿಧಾನವನ್ನು ಬರೆಯಿಸಿ ಎಂದು ಹೇಳಿದರು. ನೆಹರೂ ಅವರು ಪ್ರಥಮ ಮಂತ್ರಿಮಂಡಲದ ಪಟ್ಟಿಯನ್ನು ತೆಗೆದುಕೊಂಡು ಒಪ್ಪಿಗೆ ಪಡೆಯುವ ಸಲುವಾಗಿ ಗಾಂಧೀಜಿಯವರ ಬಳಿ ಹೋದಾಗ, ಗಾಂಧೀಜಿಯವರು ’ನಿಮ್ಮ ಮಂತ್ರಿಮಂಡಲದಲ್ಲಿ ಅಂಬೇಡ್ಕರ್ ಹೆಸರು ಸೇರಿಸಿ’ ಎಂದು ಹೇಳುತ್ತಾರೆ.
ಕರಾಚಿಯ ಸಭೆಯಲ್ಲಿ ಭಾಷಣ ಮಾಡುವಾಗ ಗಾಂಧೀಜಿಯವರು ಅಂಬೇಡ್ಕರ್ ಸಾಮಾನ್ಯ ವ್ಯಕ್ತಿಯಲ್ಲ. ಈ ದೇಶದ ದಲಿತರ ಹಿತರಕ್ಷಣೆಗೆ ದುಡಿಯುತ್ತಿರುವ ವಿಶೇಷ ವ್ಯಕ್ತಿ ಎಂದು ಹೇಳಿದ್ದಾರೆ. ಇಡೀ ರಾಷ್ಟ್ರದ ಹಿತವನ್ನು ಗಮನದಲ್ಲಿಟ್ಟುಕೊಂಡು ಭಾರತ ಸಂವಿಧಾನವನ್ನು ರಚಿಸಿದ ಅಂಬೇಡ್ಕರ್ ಅವರು ಬುದ್ಧರು ಪ್ರತಿಪಾದಿಸಿದ ’ಸ್ವಾತಂತ್ರ್ಯ, ಸಮಾನತೆ, ಸಹೋದರತೆ’ಯನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಜಾತೀಯತೆ, ಅಸ್ಪೃಶ್ಯತೆ, ಮಹಿಳಾ ವಿರೋಧಿಯಾದ ಮನುಸ್ಮೃತಿಯನ್ನು ಅಂಬೇಡ್ಕರ್ ಅವರು ಸುಡುವಾಗ ಆ ಸಭೆಯಲ್ಲಿ ನಿರ್ಣಯವನ್ನು ಮಂಡಿಸಿದ್ದು ಬ್ರಾಹ್ಮಣ ಸಹಸ್ರಬುದೆ. ನೀರಾವರಿ ಹಾಗೂ ಕಾರ್ಮಿಕ ಸಚಿವರಾಗಿ ಕೆಲಸ ಮಾಡಿರುವ ಅಂಬೇಡ್ಕರ್ ಅವರು ಹಿರಾಕುಡ್, ಸೋನಾ ನದಿ ಅಣೆಕಟ್ಟು ಯೋಜನೆಯನ್ನು ರೂಪಿಸಿದರು. ಖಾಸಗಿ ಸಂಸ್ಥೆಯಾಗಿದ್ದ ವಿದ್ಯುತ್ ನಿಗಮವನ್ನು ರಾಷ್ಟ್ರೀಕರಣಗೊಳಿಸಿದರು ಎಂಬುದಾಗಿ ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ’ರಾಮನ್ ಮೆಸ್ಸೇಸೆ ಪ್ರಶಸ್ತಿ’ ಪಡೆದ ’ಸಫಾಯಿ ಕರ್ಮಾಚಾರಿ ಆಂದೋಲನ’ದ ರಾಷ್ಟ್ರೀಯ ಸಂಚಾಲಕರು, ಹೋರಾಟಗಾರರು ಆದ ಬೇಜವಾಡ ವಿಲ್ಸನ್ ಅವರು ’ಭಾರತ ಸಂವಿಧಾನದ ಮೌಲ್ಯಗಳು ಹಾಗೂ ಮೂಲಭೂತ ತತ್ವಗಳು’ ಎಂಬ ವಿಷಯ ಕುರಿತು ವಿಚಾರ ಮಂಡಿಸುತ್ತ : ಭಾರತ ಸಂವಿಧಾನದ ಪ್ರಕಾರ ಸಮಸ್ತ ನಾಗರೀಕರು ಸಮಾನರು. ಸಂವಿಧಾನದ ಮೌಲ್ಯವನ್ನು ಸಂರಕ್ಷಿಸುವುದು ಜನಪ್ರತಿನಿಧಿಗಳನ್ನು ಒಳಗೊಂಡಂತೆ ಭಾರತೀಯರಾದ ನಮ್ಮೆಲ್ಲರ ಆದ್ಯ ಕರ್ತವ್ಯ. ರಾಜಕೀಯ ತೀರ್ಮಾನಗಳು ಸಂವಿಧಾನಬದ್ಧವಾಗಿರಬೇಕು. ಸಂವಿಧಾನವು ಪ್ರತಿಪಾದಿಸುವಂತೆ ವ್ಯಕ್ತಿ ಗೌರವ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನ ಅವಕಾಶವನ್ನು ಕಾಪಾಡುವುದು ನಮ್ಮೆಲ್ಲ ಹೊಣೆಗಾರಿಕೆ. ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಆದಿವಾಸಿ, ಬುಡಕಟ್ಟು, ಅಲೆಮಾರಿ, ಪೌರಕಾರ್ಮಿಕರು, ರೈತರು ಹಾಗೂ ಮಹಿಳೆಯರ ಹಿತ ಕಾಪಾಡುವುದು ನಮ್ಮೆಲ್ಲಾ ಜನಪ್ರತಿನಿಧಿಗಳ ಕರ್ತವ್ಯ. ಜಾತೀಯತೆ, ಅಸ್ಪೃಶ್ಯತೆ, ಅಸಮಾನತೆಯನ್ನು ಹೋಗಲಾಡಿಸಲು ನಾವೆಲ್ಲರೂ ಶ್ರಮಿಸಬೇಕಿದೆ. ಭಾರತ ಸಂವಿಧಾನ, ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿಗಳಾದ ಪ್ರೊ. ಎಂ. ವಿ. ಅಳಗವಾಡಿ ಅವರು ಅಂಬೇಡ್ಕರ್ ಅವರು ಯಾವುದೇ ಒಂದು ಸಮುದಾಯದ ನಾಯಕರು ಮಾತ್ರವಲ್ಲ, ಅವರು ಇಡೀ ಭಾರತೀಯರ ನಾಯಕರಾಗಿದ್ದಾರೆ. ಇಡೀ ದೇಶದ ಪ್ರಜೆಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನವನ್ನು ಬರೆದಿದ್ದಾರೆ. ಅಂಬೇಡ್ಕರ್ ಅವರ ವ್ಯಕ್ತಿತ್ವ, ಚಿಂತನೆ, ಬರಹದ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ನಡೆ-ನುಡಿ-ವ್ಯಕ್ತಿತ್ವದಲಿ ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಮುಷ್ತಕ್ ಅಹಮದ್ ಐ ಪಟೇಲ್ ಅವರು ಅಂಬೇಡ್ಕರ್ ಅವರು ಕನಸು ಕಂಡ ಬಹುತ್ವ, ಸಹಿಷ್ಣು, ಸಮಾನತೆಯ ಪ್ರಜಾಪ್ರಭುತ್ವವಾದಿ ಭಾರತವನ್ನು ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಹೇಳಿದರು. ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಅಪ್ಪಗೆರೆ ಸೋಮಶೇಖರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಡಾ. ರೂಪರಾಣಿ ಸೋನವಾಲ, ಎಂ. ಮಹೇಂದ್ರ ಕಾರ್ಯಕ್ರಮವನ್ನು ನಿರೂಪಿಸಿದರು. ಪರೀಕ್ಷಾಂಗ ಕುಲಸಚಿವರಾದ ಪ್ರೊ. ಕೆರೂರ್, ಸಮಾನ ಅವಕಾಶಗಳ ವಿಶೇಷ ಘಟಕದ ಅಧಿಕಾರಿಯಾದ ಡಾ. ಶಿವಕುಮಾರ್ ದೀನೆ, ಡಾ. ದೀಪಕ್ ಶ್ಯಾಮ್ಯುಯಲ್, ಡಾ. ಇನಾಮುಲ್ ಆಜಾದ್, ಡಾ. ಜಯದೇವಿ ಜಂಗಮಶೆಟ್ಟಿ, ಡಾ. ತ್ರಿನಾದ್, ಡಾ. ನಿತಿನ್, ಡಾ. ವಿಕ್ರಮ್ ವಿಸಾಜಿ ಉಪಸ್ಥಿತರಿದ್ದರು. ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಡೀನರು, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಬೇರೆಬೇರೆ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಆನ್‌ಲೈನ್ ಮೂಲಕ ವೆಬಿನಾರಿನಲ್ಲಿ ಭಾಗವಹಿಸಿದ್ದರು.