ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ರೂಪು ರೇಷೆ ಅಂತೀಮಗೊಳಿಸಿ ಮೂರು ತಿಂಗಳೊಳಗೆ ಭರ್ತಿಗೆ ಚಾಲನೆ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟ ಭರವಸೆ ನೀಡಿದರು.
ಬೆಂಗಳೂರಿನಲ್ಲಿಂದು ಕಲ್ಯಾಣ ಕರ್ನಾಟಕದ ಶಾಸಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್ 19 ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಗೆ ಅಡ್ಡಿಯಾಗಿತ್ತು. ಈಗ ತುರ್ತಾಗಿ ನೇಮಕಾತಿಗೆ ಚಾಲನೆ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಅದೇ ರೀತಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ (ಕೆಕೆಆರ್ ಡಿಬಿ) ಮಂಡಳಿಗೆ ಪ್ರಸಕ್ತವಾಗಿ ಪ್ರಕಟಿಸಲಾದ ಅನುದಾನ ಸಂಪೂರ್ಣವಾಗಿ ಬಿಡುಗಡೆ ಮಾಡಲಾಗುವುದು. ಬಹು ಮುಖ್ಯವಾಗಿ ಕಾಮಗಾರಿಗಳ ಅನುಮೋದನೆ ನೀಡುವುದು ಸೇರಿದಂತೆ ಈಗಿರುವ ಕಾನೂನು ತೊಡಕುಗಳ ನಿವಾರಣೆಗೆ ಕಾನೂನು ತಿದ್ದುಪಡಿ ತರಲಾಗುವುದು ಎಂದು ಸಿಎಂ ಪ್ರಕಟಿಸಿದರು.
ಆಡಳಿತ ವೈಫಲ್ಯ ದಿಂದ ನಷ್ಟದಲ್ಲಿದ್ದು, ರೈತರಿಗೆ ನಯಾ ಪೈಸೆ ಸಾಲ ನೀಡದಿರುವ ವ್ಯವಸ್ಥೆ ಗೆ ತಲುಪಿಸಿರುವ ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ (ಡಿಸಿಸಿ) ಪುನಶ್ಚೇತನ ಕ್ಕೆ ಕ್ರಮ ಕೈಗೊಂಡು ರೈತರಿಗೆ ಸಾಲ ದೊರಕಿಸುವಂತಾಗಲು ದೃಢ ಹೆಜ್ಜೆ ಇಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಕಲ್ಯಾಣ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಸೂಕ್ತ ಅನುದಾನ ಕಲ್ಪಿಸಿ ಅಭಿವೃದ್ಧಿ ವೇಗ ಚುರುಕುಗೊಳಿಸಲಾಗುವುದು.ಅದೇ ರೀತಿ ಕುಡಿಯುವ ನೀರಿನ ಹಾಗೂ ವಸತಿ ಸಮಸ್ಯೆ ಅಧ್ಯತೆ ಮೇರೆಗೆ ನಿವಾರಿಸಲಾಗುವುದು. ಒಟ್ಟಾರೆ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ದ ವಿದೆ. ಎಲ್ಲ ಶಾಸಕರು ಒಗ್ಗೂಡಿ ಕೆಲಸ ಮಾಡಿದಲ್ಲಿ ಅಭಿವೃದ್ಧಿ ವೇಗ ಮತ್ತಷ್ಟು ವೇಗಗೊಳ್ಳುತ್ತದೆ ಎಂದು ಸಿಎಂ ಕಿವಿ ಮಾತು ಹೇಳಿದರಲ್ಲದೇ ಮತ್ತೆ ಮೂರು ತಿಂಗಳೊಳಗೆ ಈ ತರಹ ಶಾಸಕರ ಸಭೆ ನಡೆಸುವುದಾಗಿ ಹೇಳಿದರು.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರು ಹಾಗೂ ಸೇಡಂ ಶಾಸಕರು ಮತ್ತು ವಿಭಾಗೀಯ ಪ್ರಭಾರಿ ರಾಜಕುಮಾರ ಪಾಟೀಲ್ ಸಭೆಯಲ್ಲಿ ಮಾತನಾಡಿ, ಕಲ್ಯಾಣ ಕರ್ನಾಟಕದ ಬೇಡಿಕೆಗಳ ಕುರಿತಾಗಿ ಪ್ರಸ್ತಾವನೆಗಳನ್ನು ಮಂಡಿಸಿದರಲ್ಲದೇ ಕಲ್ಯಾಣ ಕರ್ನಾಟಕ ಶಾಸಕರ ಸಭೆ ನಡೆಸಿದ್ದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲು ಅವರನ್ನು ಅಭಿನಂದಿಸಿದರು.
ಸಭೆಯಲ್ಲಿ ಉಪಮುಖ್ಯಮಂತ್ರಿ ಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಅಶ್ವಥ್ ನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ಆರ್ ಅಶೋಕ, ವಿ. ಸೋಮಣ್ಣ ಸೇರಿದಂತೆ ಕಲ್ಯಾಣ ಕರ್ನಾಟಕದ ಎಲ್ಲ ಶಾಸಕರು ಪಾಲ್ಗೊಂಡಿದ್ದರು.