ವಾಡಿ: ಕ್ರೂರಿ ಕೊರೊನಾ ರೋಗದ ಭೀತಿಯ ಮಧ್ಯೆ ಶಾಲೆಗಳು ಶುರುವಾಗಿದ್ದು, ವರ್ಷದ ನಂತರ ರಂಗಿನ ಶಾಲಾ ಸಮವಸ್ತ್ರ ಧರಿಸಿ ಬಂದ ವಿದ್ಯಾರ್ಥಿಗಳ ದರ್ಶನವಾಗುತ್ತಿದೆ. ಸಾಂಕ್ರಾಮಿಕ ರೋಗದ ಸಾಮಾಜಿಕ ಅಂತರ ಕಾಪಾಡುವ ಸರಕಾರದ ಆದೇಶದ ಪ್ರತಿಯಾಗಿ ಸಾಲುಗಟ್ಟಿ ತರಗತಿ ಕೋಣೆ ಪ್ರವೇಶಿಸುವ ನಿಯಮ ಮಕ್ಕಳಲ್ಲಿ ಮತ್ತಷ್ಟು ಶಿಸ್ತು ಅನಾವರಣಗೊಳಿಸಿದೆ.
ಆನ್‌ಲೈನ್ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದ ಖಾಸಗಿ ಶಿಕ್ಷಣ ಸಂಸ್ಥಗಳೀಗ ಆರನೇ, ಏಳನೇ ಮತ್ತು ಹತ್ತನೇ ತರಗತಿಗಳ ವಿದ್ಯಾರ್ಥಿಗಳಿಗೆ ಆಫ್‌ಲೈನ್ ಶಿಕ್ಷಣ ಬೋಧಿಸಲು ಶುರುಮಾಡಿವೆ. ಲಾಕ್‌ಡೌನ್ ಸಮಯವನ್ನು ಶಾಲೆಯ ದುರಸ್ಥಿ ಮತ್ತು ಸೌಂದರ್ಯೀಕರಣಕ್ಕೆ ಬಳಕೆ ಮಾಡಿಕೊಂಡ ಶಿಕ್ಷಣ ಸಂಸ್ಥೆಗಳು, ಶಾಲಾ ಕಟ್ಟಡಕ್ಕೆ ಸುಣ್ಣಬಣ್ಣ ಬಳಿದು ಅಂದಚಂದಗೊಳಿಸಿದ್ದಾರೆ. ಅತ್ಯಾಕರ್ಷಕ ವರ್ಣಗಳಿಂದ ಶಾಲೆಯನ್ನು ಶೃಂಗರಿಸಿ ಮಕ್ಕಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.
ನಗರದ ಸರಕಾರಿ ಶಾಲೆಗಳು ಎಂದಿನಂತೆ ಸುಣ್ಣಬಣ್ಣ ಕಾಣದೆ ಮಕ್ಕಳನ್ನು ಸ್ವಾಗತಿಸಿಕೊಂಡರೆ, ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳಾದ ಸಂತ್ ಅಂಬ್ರೂಸ್ ಕಾನ್ವೆಂಟ್, ಡಿಎವಿ ಪಬ್ಲಿಕ್ ಸ್ಕೂಲ್, ಮಹಾತ್ಮಾ ಗಾಂಧಿ ಆಂಗ್ಲ ಮಾಧ್ಯಮ, ಬಂಜಾರಾ ಶಿಕ್ಷಣ ಸಂಸ್ಥೆಯ ಶ್ರೀಗುರು ಪ್ರೌಢ ಶಾಲೆ, ರಾವೂರಿನ ಶ್ರೀಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಹಸಿರು ವನಗಳಿಂದ ಕಂಗೊಳಿಸುತ್ತಿವೆ. ಮಕ್ಕಳ ಪಾರ್ಕ್ ಅಭಿವೃದ್ಧಿಪಡಿಸಿವೆ. ಶಾಲೆಗಳಿಗೆ ಸ್ಯಾನಿಟೈಸರ್ ಸಿಂಪರಣೆ ಮಾಡಿ ಮಕ್ಕಳನ್ನು ಸ್ವಾಗತಿಸಿಕೊಂಡಿವೆ. ನಗರದ ವಿವಿಧ ಕನ್ನಡ ಮಾಧ್ಯಮ ಖಾಸಗಿ ಶಾಲೆಗಳೂ ಸಹ ಮಕ್ಕಳನ್ನು ಸೆಳೆಯುವಲ್ಲಿ ಹಿಂದೆಬಿದ್ದಿಲ್ಲ ಎನ್ನಬಹುದು.
ರೋಗದ ಭೀತಿಯ ನಡುವೆಯೂ ಬಹುತೇಕ ಮಕ್ಕಳು ನಮ್ಮ ನಿರೀಕ್ಷೆ ಮೀರಿ ಶಾಲೆಗೆ ಹಾಜರಾಗುತ್ತಿದ್ದಾರೆ. ಆಸಕ್ತಿಯಿಂದ ಕಲಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಮಕ್ಕಳ ಅರೋಗ್ಯದ ದೃಷ್ಠಿಯಿಂದ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಅನುಸರಿಸಿಕೊಂಡು ಶಿಕ್ಷಣ ಹೇಳಿಕೊಡುತ್ತಿದ್ದೇವೆ ಎನ್ನುತ್ತಾರೆ ಸಂತ್ ಅಂಬ್ರೂಸ್ ಕಾನ್ವೆಂಟ್ ಶಾಲೆಯ ಕನ್ನಡ ಶಿಕ್ಷಕ ಇಮಾನ್ವೆಲ್.