ಕಲಬುರಗಿ: ಉತ್ತರ ಪ್ರದೇಶದಲ್ಲಿನ ಅಯೋಧ್ಯೆಯಲ್ಲಿನ ಶ್ರೀರಾಮಮಂದಿರ ನಿರ್ಮಾಣ ಹಾಗೂ ಗುಜರಾತ್‌ನಲ್ಲಿನ ನರ್ಮದಾ ನದಿಯ ಸರ್ದಾರ್ ಸರೋವರ ಆಣೆಕಟ್ಟು ಪ್ರದೇಶದಲ್ಲಿನ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಬೃಹತ್ ಗಾತ್ರದ ಪ್ರತಿಮೆ ನಿರ್ಮಾಣದ ರೀತಿಯಲ್ಲಿಯೇ ಕಲ್ಯಾಣ ನಾಡಿನ ಬಸವಕಲ್ಯಾಣದಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅನುಭವ ಮಂಟಪ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, ಭವ್ಯ ಅನುಭವ ಮಂಟಪ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸಲು ಸಂಕಲ್ಪ ಮಾಡೋಣ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯರು ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಾಮರಾವ್ ಪ್ಯಾಟಿ ಅವರು ವಿನಂತಿಸಿದ್ದಾರೆ.
ಸಕಲ ಜೀವಾತ್ಮಕ್ಕೆ ಲೇಸನ್ನೇ ಬಯಸಿದ ಇವನಾರವ, ಇವನಾರವ ಎಂದೆನಿಸದೇ ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯಾ ಎಂದ ಸಮಾಜ ಉದ್ಧಾರಕ, ಭಕ್ತಿ ಭಂಡಾರಿ ಬಸವಣ್ಣನವರ ಅನುಭವ ಮಂಟಪಕ್ಕೆ ನಾಡಿನ ದೊರೆ ಬಿ.ಎಸ್. ಯಡಿಯೂರಪ್ಪ ಅವರು ಭೂಮಿ ಪೂಜೆ ನೆರವೇರಿಸಿದ್ದು ನಮಗೆಲ್ಲ ಹೆಮ್ಮೆಯ ಹಾಗೂ ಐತಿಹಾಸಿಕ ಮತ್ತು ಇಡೀ ಕರ್ನಾಟಕವಲ್ಲದೇ ಭಾರತದಲ್ಲಿಯೇ ಸುವರ್ಣಾಕ್ಷರಗಳಿಂದ ಬರೆದಿಡುವಂತಹ ಕಾರ್ಯವಾಗಿದೆ ಎಂದು ಅವರು ಹೇಳಿಕೆಯಲ್ಲಿ ಬಣ್ಣಿಸಿದ್ದಾರೆ.
ಕಲ್ಯಾಣ ನಾಡಿನ ನಾವೆಲ್ಲರೂ ಕೈ ಜೋಡಿಸಿ ಭಾಗಿಗಳಾಗಿ ಸೇವೆ ಮಾಡೋಣ. ಈಗಾಗಲೇ ಉತ್ತರ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಇಡೀ ದೇಶದ ಜನರು ತನು, ಮನ, ಧನದಿಂದ ಸೇವೆ ಮಾಡಿದ್ದರಿಂದ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ಅದೇ ರೀತಿ ಗುಜರಾತ್‌ದಲ್ಲಿಯೂ ಸಹ ನರ್ಮದಾ ನದಿಯ ದಂಡೆಯ ಮೇಲೆ ಅತೀ ಎತ್ತರದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಯನ್ನು ಸ್ಥಾಪಿಸುವಲ್ಲಿ ಸಾರ್ವಜನಿಕರ ಸೇವೆಯನ್ನು ಮರೆಯಲಾಗದು.
ಅದೇ ರೀತಿ ಜಾಗತಿಕ ಮಟ್ಟದಲ್ಲಿ ಪ್ರಥಮ ಸಂಸತ್ತು ಎಂದು ಕರೆಸಿಕೊಳ್ಳುವ ೧೨ನೇ ಶತಮಾನದಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಹುಟ್ಟುಹಾಕಿದ ಬಸವಕಲ್ಯಾಣದಲ್ಲಿನ ಅನುಭವ ಮಂಟಪವು ಮುಂದಿನ ಪೀಳಿಗೆಗೂ ಮಾದರಿಯಾಗಲು ಹಾಗೂ ಪ್ರೇರಣೆ ಹೊಂದಲು ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಆ ದಿಸೆಯಲ್ಲಿ ಎಲ್ಲರೂ ವಿಶೇಷವಾಗಿ ಕಲ್ಯಾಣ ಕರ್ನಾಟಕದ ಜನಗಳಾದ ನಾವು ಭಕ್ತಿ ಭಾವದಿಂದ ಬಸವಣ್ಣನವರು ಕಂಡ ಕನಸು ನನಸಾಗಿಸಲು ಬಹುಬೇಗನೇ ನಿರ್ಮಾಣವಾಗಲು ಎಲ್ಲರೂ ಮುಕ್ತ ಮನಸ್ಸಿನಿಂದ ತನು, ಮನ, ಧನ ವಿತ್ತು ನೋಡಿರಯ್ಯ ಎಂಬ ಶರಣರ ವಾಣಿಯನ್ನು ಸಾಕಾರಗೊಳಿಸಬೇಕು ಎಂದು ಅವರು ವಿನಂತಿಸಿದ್ದಾರೆ.