ಕಲಬುರಗಿ: ಇಡೀ ಸಮಾಜವೇ ಶಿಕ್ಷಕರ ಮೇಲೆ ಅವಲಂಬಿತವಾಗಿದೆ. ಇಂತ ಉನ್ನತ ಸ್ಥಾನದಲ್ಲಿರುವ ಶಿಕ್ಷಕರು ತಮ್ಮ ಕರ್ತವ್ಯದ ವಿಷಯದಲ್ಲಿ ಯಾವತ್ತೂ ಅನಾಸಕ್ತಿ ತೋರಬಾರದು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ೨೦೨೦-೨೫ ನೇ ಸಾಲಿನ ಅವಧಿಗಾಗಿ ಆಯ್ಕೆಯಾದ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳಿಗೆ ವಿಶ್ವಜ್ಯೋಗಿ ಪ್ರತಿಷ್ಠಾನ ನಗರದ ಸರಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ಪ್ರಾಂಗಣದಲ್ಲಿ ಗುರುವಾರ ಆಯೋಜಿಸಿದ ‘ಅಭಿನಂದನಾ ಸಮಾರಂಭದಲ್ಲಿ’ ಭಾಗವಹಿಸಿ ಮಾತನಾಡಿದ ಅವರು, ಈ ದೇಶದ ಅಭಿವೃದ್ಧಿ ಶಿಕ್ಷಣದಿಂದಲೇ ಮಾತ್ರ ಸಾಧ್ಯ. ಒಬ್ಬ ಸಮರ್ಥ ಶಿಕ್ಷಕ ರಾಷ್ಟ್ರ ರಕ್ಷಕರಾಗುತ್ತಾರೆ ಎಂದು ಹೇಳಿದರು.
ಪ್ರತಿಷ್ಠಾನ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವರು ಶಿಕ್ಷಕರಾಗಿದ್ದಾರೆ. ಇಂಜಿನೀಯರ್ ಕಾರ್ಯದಲ್ಲಿ ದೋಷವಾದರೆ ಕಟ್ಟಡ ಹಾನಿಯಾಗುವುದು. ವೈದ್ಯನ ವೃತ್ತಿಯಲ್ಲಿ ದೋಷವಾದರೆ ರೋಗಿಗೆ ಹಾನಿಯಾಗುವುದು. ಆದರೆ ಶಿಕ್ಷಕನ ಕರ್ತವ್ಯದಲ್ಲಿ ಚ್ಯುತಿ ಉಂಟಾದರೆ ಇಡೀ ವಿದ್ಯಾರ್ಥಿ ಸಮೂಹದ ಭವಿಷ್ಯವೇ ಹಾಳಾಗುವುದು. ಆದ್ದರಿಂದ ಶಿಕ್ಷಕರ ಜವಾಬ್ದಾರಿ ಅತ್ಯಂತ ಗುರುತರವಾದದ್ದು. ದಕ್ಷತೆ, ಪ್ರಾಮಾಣಿಕತೆಯಿಂದ ಶಿಕ್ಷಕರು ಕರ್ತವ್ಯ ನಿರ್ವಹಿಸುವುದು ಅತೀ ಅವಶ್ಯವಿದೆ ಎಂದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಯ್ಯಾ ಗುತ್ತೇದಾರ ಮಾತನಾಡಿ, ಗುರಿ ತಲುಪಲು ಗುರು ಬೇಕು. ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕಲಿಸುವಿಕೆಗೆ ಕಂಕಣಬದ್ಧರಾಗಿ ಶಿಕ್ಷಣ ರಂಗಕ್ಕೆ ಬಂದ ಶಿಕ್ಷಕ-ಶಿಕ್ಷಕಿಯರು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದರ ಫಲವಾಗಿ ಇಂದು ಸಾವಿರಾರು ಜನರು ಉನ್ನತ ಹುದ್ದೆಯಲ್ಲಿದ್ದಾರೆ ಎಂದ ಅವರು, ಸಂಘವು ವತಿಯಿಂದ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣ ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದರು.
ಬಾಲ್ಯದಲ್ಲಿ ಮಕ್ಕಳಿಗೆ ಉತ್ತಮ ಜೀವನದ ಮೌಲ್ಯಗಳನ್ನು ಅಳವಡಿಸಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಶಿಕ್ಷಕರ ಶ್ರಮ ಅನನ್ಯ. ಪ್ರತಿಷ್ಠಾನವು ಇಂಥ ಆದರ್ಶ ಶಿಕ್ಷಕರನ್ನು ಗೌರವಿಸುತ್ತಿರುವ ಕಾರ್ಯ ಶ್ಲಾಘನೀಯ. -ಮಹ್ಮದ್ ಅಸಗರ ಚುಲಬುಲ್, ಮಾಜಿ ಅಧ್ಯಕ್ಷರು, ಕುಡಾ.
ಉಪನ್ಯಾಸಕ ಲಕ್ಷ್ಮಣ ಜಾಧವ ಅಧ್ಯಕ್ಷತೆ ವಹಿಸಿದ್ದರು. ಕುಡಾ ಮಾಜಿ ಅಧ್ಯಕ್ಷ ಮಹ್ಮದ್ ಅಸಗರ ಚುಲಬುಲ್, ನ್ಯಾಯವಾದಿ ಗಂಗಾಧರ ಮುನ್ನೋಳ್ಳಿ, ಗುರೂಜಿ ಡಿಗ್ರಿ ಕಾಲೇಜಿನ ಅಧ್ಯಕ್ಷ ಕಲ್ಯಾಣಕುಮಾರ ಶೀಲವಂತ, ಶ್ರೀ ವಿಶ್ವಗಂಗಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಂಕರ ಬಿರಾದಾರ, ಪ್ರತಿಷ್ಠಾನ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ ಮಾತನಾಡಿದರು. ಪ್ರಮುಖರಾದ ಅಕ್ಕಮಹಾದೇವಿ ಹೆಚ್.ಎಂ., ರವೀಂದ್ರಕುಮಾರ ಭಂಟನಳ್ಳಿ, ಪ್ರಭುಲಿಂಗ ಮೂಲಗೆ, ಮಾಲತಿ ರೇಷ್ಮಿ, ಮಂಜುಳಾ ಪಾಟೀಲ, ಮಾಲಾ ಕಣ್ಣಿ, ಮಾಲಾ ದಣ್ಣೂರ, ಶರಣಬಸವ ಜಂಗಿನಮಠ, ಶಿವಾನಂದ ಮಠಪತಿ, ಎಸ್.ಎಂ.ಪಟ್ಟಣಕರ್, ಶರಣಬಸಪ್ಪ ನರೋಣಿ, ಪ್ರಸನ್ನ ವಾಂಜರಖೇಡೆ, ಸತೀಶ ಸಜ್ಜನಶೆಟ್ಟಿ, ಲಗುಮಣ್ಣಾ ಕರಗುಪ್ಪಿ, ಮೀನಾಕ್ಷಿ ಕುಂಬಾರ, ಲಕ್ಷ್ಮೀ ಕುಂಬಾರ, ಭುವನೇಶ್ವರಿ ಹಳ್ಳಿಖೇಡ, ಸುರೇಶ ವಗ್ಗೆ, ಧರ್ಮಣ್ಣ ಧನ್ನಿ, ವೀರುಪಾಕ್ಷಗೌಡ ಹಿರೇಗೌಡ, ವಿಶ್ವನಾಥ ತೊಟ್ನಳ್ಳಿ, ಶಿವರಾಜ್ ಕಾಳಗಿ, ಪ್ರೊ.ಶಿವರಾಜ ಪಾಟೀಲ, ಹೆಚ್.ಎಸ್.ಬರಗಾಲಿ, ಸೇರಿದಂತೆ ವಿವಿಧ ತಾಲೂಕುಗಳಿಂದ ಆಗಮಿಸಿದ ಶಿಕ್ಷಕರು, ಸಾಹಿತ್ಯ ಪ್ರೇಮಿಗಳು ಭಾಗವಹಿಸಿದ್ದರು.