ರೈತ ವಿರೋಧಿ, ಜನ ವಿರೋಧಿ, ಕೃಷಿ ಕಾಯ್ದೆಗಳು ರದ್ದಾಗಲಿ: ಅಪರ್ಣಾ ಬಿ.ಆರ್

0
29

ಕಲಬುರಗಿ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಅಖಿಲ ಭಾರತ ಮಹಿಳ ಸಾಂಸ್ಕೃತಿಕ ಸಂಘಟನೆ  ಬೆಂಬಲಿಸಿ ಸಿಂಘು ಬಾರ್ಡರ್ ಹಾಗೂ ಇನ್ನಿತರ ಸ್ಥಳಗಳಿಗೆ ಭೇಟಿ ಎ.ಐ.ಎಮ್.ಎಸ್.ಎಸ್ ರಾಜ್ಯಾಧ್ಯಕ್ಷರಾದ ಅಪರ್ಣಾ ಬಿ.ಆರ್ ಪತ್ರಿಕಾ ಗೋಷ್ಥಿ ನಡೆಸುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ರೈತರರು ಜಾಗೃತರಾಗಲು ಕರೆ ನೀಡಿದ್ದಾರೆ.

ನಗರದ ನೀಡಿದ ಎ.ಐ.ಎಂ.ಎಸ್.ಎಸ್ ಕಛೇರಿಯಲ್ಲಿ ಮಾತನಾಡಿದ ಹೋರಾಟ ನಿರತ ರೈತರಿಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಲು ಎ.ಐ.ಎಂ.ಎಸ್.ಎಸ್.ನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಗಳಾದ ಕಾ. ಛಬಿರಾಣಿ ಮೊಹಂತಿ ಅವರ ನೇತೃತ್ವದಲ್ಲಿ ಅಖಿಲ ಭಾರತ ಉಪಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯಾಧ್ಯಕ್ಷರಾದ ಕಾ. ಅಪರ್ಣ ಬಿ.ಆರ್. ಮತ್ತು ಅಖಿಲ ಭಾರತ ಸಮಿತಿಯ ಖಚಾಂಚಿಗಳಾದ ಕಾ. ಮೊಹುವಾ ನಂದಾ ಅವರು ನಿಯೋಗದಲ್ಲಿ ತೆರಳಿ ಸಿಂಘು ಗಡಿ, ಘಾಜಿಫೂರ್ ಘಡಿ, ಠೆಕ್ರಿ ಘಡಿ ಹಾಗೂ ಷಹಜಾನ್‌ಪುರ್ ಘಡಿಗೆ ಭೇಟಿ ನೀಡಿರುವ ಬಗ್ಗೆ ಮಾಹಿತಿ ನೀಡಿದರು.

Contact Your\'s Advertisement; 9902492681

ಅವರು ಕೇಂದ್ರ ಬಿ.ಜೆ.ಪಿ. ಸರ್ಕಾರ ಜಾರಿಗೆ ತಂದಿರುವ ಅತ್ಯಂತ ಕಡು ರೈತ ವಿರೋಧಿ ಕಾಯ್ದೆಗಳು ಹಾಗೂ ವಿದ್ಯುತ್‌ಚ್ಚಕ್ತಿ ಬಿಲ್ ೨೦೨೦ ನ್ನು ವಿರೋದಿಸಿ ದೆಹಲಿಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಳೆದ ೩೪ ದಿನಗಳಿಂದ ಕೋಟ್ಯಾಂತರ ರೈತರು ಪ್ರತಿಭಟಿಸುತ್ತಿದ್ದಾರೆ. ಇಡೀ ಕೃಷಿರಂಗವನ್ನು ನರೇಂದ್ರಮೋದಿ ಸರ್ಕಾರ, ಕಾರ್ಪೋರೇಟ್ ಮನೆತನಗಳಿಗೆ ನೆರವಾಗುವಂತೆ ಲಜ್ಜಾ ರಹಿತವಾಗಿ ತೆರೆದಿಟ್ಟಿರುವ ಈ ನಡೆಯನ್ನು ಖಂಡಿಸಿ ರೈತರು ನಡೆಸುತ್ತಿರುವ ಈ ಧೀರೋದ್ದಾತ ಹೋರಾಟ ಅತ್ಯಂತ ನ್ಯಾಯೋಚ್ಚಿತವಾಗಿದ್ದು, ಕೇವಲ ದೇಶದ ಮಾತ್ರವಲ್ಲ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ, ಬೆಂಬಲ ಪಡೆದಿದೆ. ಈ ಕಾಯ್ದೆಗಳು ರೈತರನ್ನು ಮಾತ್ರ ಕಂಗಾಲು ಮಾಡುವಂತವುದಲ್ಲದೆ, ಇಡೀ ದೇಶದ ಆಹಾರ ಭದ್ರತೆಯನ್ನೇ ಅಲುಗಾಡಿಸುತ್ತದೆ. ಆದ್ದರಿಂದಲೇ ಎ.ಐ.ಎಂ.ಎಸ್.ಎಸ್.ನ ಅಖಿಲಭಾರತ ಸಮಿತಿಯು, ರೈತರು ದಹಲಿ ಚಲೋ ಕಾರ್ಯಕ್ರಮವನ್ನು ಪ್ರಾರಂಭಿಸಿದ ಮೊದಲನೇ ದಿನದಿಂದಲೇ ಅವರ ಹೋರಾಟಕ್ಕೆ ತನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತ ಪಡಿಸಿದೆ. ದೇಶದಾದ್ಯಂತ ಇಂದಿನವರೆಗೂ ಹಲವಾರು ಪ್ರತಿಭಟನೆಗಳನ್ನು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ ಎಂದು ತಿಳಿಸಿದ್ದಾರೆ.

ಎಲ್ಲಾ ಗಡಿಗಳಲ್ಲೂ ರೈತರು ’ಸಂಯುಕ್ತ ಕಿಸಾನ್ ಮೋರ್ಚಾ’ ಅಡಿಯಲ್ಲಿ ಇಡೀ ದೇಶದ ಇತಿಹಾಸದಲ್ಲೇ ಕಂಡು ಕೇಳರಿಯದ ಮಾದರಿಯಲ್ಲಿ ಪ್ರತಿಭಟಿಸುತ್ತಿದ್ದಾರೆ. ನಲವತ್ತಕ್ಕೂ ಹೆಚ್ಚು ರೈತರು ತೀವ್ರ ಚಳಿಯ ಪರಿಣಾಮದಿಂದಾಗಿ ಸಾವನ್ನಪ್ಪಿದ್ದಾರೆ. ಆದರೆ, ರೈತರ ಹೋರಾಟದ ಕೆಚ್ಚು ಸ್ವಲ್ಪವೂ ತಗ್ಗಿಲ್ಲ, ಬದಲಿಗೆ ದಿನದಿಂದ ದಿನಕ್ಕೆ ಸಹಸ್ರಾರು ರೈತರು ಈ ಸಾಗರವನ್ನು ಸೇರುತ್ತಿದ್ದಾರೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ್ ಮತ್ತು ರಾಜಸ್ತಾನದ ರೈತರು ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ಉತ್ತರಾಖಾಂಡ್ ದಿಂದ ಹೊರಟಿದ್ದ ರೈತರನ್ನು ಉತ್ತರ ಪ್ರದೇಶದ ಸರ್ಕಾರ ತನ್ನ ಗಡಿ ದಾಟಲು ಬಿಡಲಿಲ್ಲ. ಇದರಿಂದಾಗಿ ಅವರು ಅಲ್ಲಿಯೇ ಪ್ರತಿಭಟನೆ ಪ್ರಾರಂಭಿಸಿದ್ದಾರೆ. ತಮ್ಮ ಊರುಗಳಿಂದ ಟ್ರ್ಯಾಕ್ಟರ್‌ಗಳಲಿ ಹೊರಟಿರುವ ರೈತರು ದವಸ, ಧಾನ್ಯ, ಕಟ್ಟಿಗೆಗಳನ್ನು ತುಂಬಿಕೊಂಡು ಇಡೀ ಪರಿವಾರ ಸಮೇತ ಹೊರಟು ಬಂದಿದ್ದಾರೆ. ಟ್ರ್ಯಾಲಿಗಳಲ್ಲೇ ಅವರ ವಾಸ ಸಾವಿರಾರು ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಇದ್ದಾರೆ. ವೃದ್ದರು ಸಹ ಬಹಳ ದೊಡ್ಡ ಸಂಖ್ಯೆಯಲ್ಲಿದ್ದಾರೆ ಮತ್ತು ತಂದೆ ತಾಯಿಯರೊಡನೆ ಬಂದಿರುವ ಪುಟ್ಟ ಮಕ್ಕಳನ್ನು ಕಾಣಬಹುದು. ಇನ್ನೂ ಯುವಕರೋ ಈ ಹೋರಾಟದಲ್ಲಿ ಸಕ್ರಿಯರಾಗಿರುವಂತೆಯೆ ಸ್ವಯಂ ಸೇವಕರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.

ಪ್ರತಿಭಟನಾಕಾರರಿಗೆ ಬೇಕಾದ ಆಹಾರ ಒದಗಿಸಲು ’ಲಂಘರ್’ಗಳು ನಡೆಯುತ್ತಿವೆ. ದವಸ ಧಾನ್ಯ, ತರಕಾರಿ, ಹಾಲು ಇತ್ಯಾದಿಗಳನ್ನು ಜನರು ದೇಣಿಗೆ ನೀಡುತ್ತಿದ್ದಾರೆ. ಸ್ವಯಂ ಸೇವಕರು ಅಡುಗೆ ಮಾಡಿ ಬಡಿಸುತ್ತಿದ್ದಾರೆ. ರಾತ್ರಿಯಲ್ಲಿ ದೆಹಲಿಯ ಕೊರೆವ ಚಳಿಯಲ್ಲಿ ಮಲಗುವುದು ಒಂದು ಸಾಹಸವೇ! ಅದಕ್ಕೆ ಕೆಲವರು ಬೆಚ್ಚಗಿನ ಹೊದಿಕೆಗಳನ್ನು ನೀಡುತ್ತಿದ್ದಾರೆ. ದಾನಿಗಳಲ್ಲಾಗಲೀ, ಪ್ರತಿಭಟನಾಕಾರರಲ್ಲಾಗಲೀ ಜಾತಿ, ಧರ್ಮ, ಗಡಿಯ ಭೇದಗಳನ್ನು ಹುಡುಕಲು ಸಾಧ್ಯವಾಗುತ್ತಿಲ್ಲ. ಎಲ್ಲರನ್ನೂ ಬಂಧಿಸಿರುವ ಒಂದು ಗುರಿ- ಮಸೂದೆಗಳ ಸೋಲು.

ಇಡೀ ಹಳ್ಳಿಗಳೇ ಒಂದು ದೆಹಲಿಯ ಗಡಿಭಾಗದಲ್ಲಿ ಬೀಡುಬಿಟ್ಟಿವೆ ಎಲ್ಲ ಗಡಿಗಳಲ್ಲಿಯೂ ರೈತರ ಟ್ರ್ಯಾಕ್ಟರ್‌ಗಳು ಕಿಲೋಮೀಟರ್‌ಗಳಷ್ಟು ಆಕ್ರಮಿಸಿಕೊಂಡಿವೆ. ಹೆದ್ದಾರಿಯ ಪಕ್ಕದಲ್ಲಿರುವ ಅಂಗಡಿ ಮುಗ್ಗಟ್ಟುಗಳನ್ನು ರೈತರು ತಂಗಲು ಅನುವು ಮಾಡಿಕೊಟ್ಟು, ವ್ಯಾಪಾರ ಸ್ಥಗಿತಗೊಳಿಸಿದ್ದಾರೆ. ಹಳ್ಳಿಯಲ್ಲಿ ಜನರು ತಮ್ಮ ಕಷ್ಟಸುಖಗಳನ್ನು, ಹೊಲಗೆಲಸ, ಮನೆಕೆಲಸಗಳನ್ನು ಹಂಚಿಕೊಂಡು, ಸರದಿಯಂತೆ ಗುಂಪು ಗುಂಪಾಗಿ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಒಂದೇ ನಾಡಿ ಮಿಡಿತ, ಇದಕ್ಕೆ ಕಾರಣವೇನು? ಈ ಐಕ್ಯತೆ, ಒಮ್ಮತ, ಒಗ್ಗಟ್ಟು, ಹೋರಾಟದ ಹುಮ್ಮಸ್ಸು, ಕೆಚ್ಚು ಬರಲು ಕಾರಣವೇನು, ಈ ಸೋಜಿಗದ ಹಿಂದೆ ಬಲವಾದ ಸತ್ಯವಿದೆ.

ಅದೇನೆಂದರೆ ಈ ಮೂರು ಕೃಷಿ ಕಾಯ್ದೆಗಳ ಒಟ್ಟಾರೆ ಪರಿಣಾಮವನ್ನು ಅವರು ಗಾಢವಾಗಿ ಅರಿತಿದ್ದಾರೆ. ಅವರು ಸ್ಟಷ್ಟ ಮಾತುಗಳಲ್ಲಿ ಹೇಳುವುದೆಂದರೆ- ಎ.ಪಿ.ಎಂ.ಸಿ. ಕಾಯ್ದೆ ಅನುಷ್ಠಾನಕ್ಕೆ ಬಂದರೆ, ಕ್ರಮೇಣವಾಗಿ ’ಮಂಡಿ ಪದ್ದತಿ’ ಮಾಯವಾಗುತ್ತದೆ, ಕಾರ್ಪೊರೇಟ್ ಮನೆತನಗಳ ಕೈಗೊಂಬೆಗಳಾಗುತ್ತೇವೆ, ಸರ್ಕಾರವು ಕನಿಷ್ಠ ಬೆಂಬಲ ಬೆಲೆ ನೀಡುವುದು ನಿಂತರೆ, ನಾವು ಮುಳುಗಿದಂತೆ, ಕಾಯ್ದೆಗಳಲ್ಲಿನ ಪದಪುಂಜಗಳ ಅದಲು ಬದಲು ಮೂಲಭೂತ ವ್ಯತ್ಯಾಸ ತರುವುದಿಲ್ಲ, ಪದಗಳ ಜೊತೆ ಆಟ ಬೇಡ, ಗಂಟೆಗಟ್ಟಲೇ ಚರ್ಚೆಯ ಅವಶ್ಯಕತೆ ಇಲ್ಲ, ನಮ್ಮದೊಂದೆ ಬೇಡಿಕೆ- ಮೂರು ಕಾಯ್ದೆಗಳನ್ನು ಬೇಷರತ್ತಾಗಿ ಹಿಂಪಡೆಯಿರಿ-ಎಂದು.

ಆದ್ದರಿಂದ ರೈತರು ಸರ್ಕಾರ ತನ್ನ ಬೇಡಿಕೆಗಳನ್ನು ಈಡೇರಿಸುವವರೆಗೂ ಹಿಂದಡಿ ಇಡುವುದಿಲ್ಲ ಎಂದು ಹೋರಾಟಕ್ಕೆ ಸಜ್ಜಾಗಿದ್ದಾರೆ. ಇದು ನಮ್ಮ ಅಳಿವು ಉಳಿವಿನ ಪ್ರಶ್ನೆ, ನಾವು ಮಕ್ಕಳೊಂದಿಗೆ ಬಂದಿದ್ದೇವೆ. ನಮ್ಮ ಪ್ರಾಣತ್ಯಾಗವಾದರೂ ಸರಿಯೇ ಸರ್ಕಾರ ಈ ಕಾಯ್ದೆಗಳನ್ನು ಹಿಂಪಡೆಯುವವರೆಗೂ ಇಲ್ಲಿಂದ ಹಿಂದೆ ಸರಿಯುವುದಿಲ್ಲವೆಂದು ಘೋಷಿಸಿದ್ದಾರೆ ಎಂದು ತಿಳಿಸಿದರು.

ಹೋರಾಟದ ಪ್ರಾರಂಭದ ದಿನಗಳಲ್ಲೇ ಜಲಫಿರಂಗಿಗಳನ್ನು ಎದಿರಿಸಿರುವ, ಅಶ್ರುವಾಯು ಸಿಡಿತದಿಂದ ಘಾಯಗೊಂಡಿರುವ, ಲಾಠಿ ಏಟು ತಿಂದಿರುವ, ಸರ್ಕಾರವೇ ಇವರು ದೆಹಲಿಗೆ ಬರುವುದನ್ನು ತಡೆಗಟ್ಟಲು ತೋಡಿದ್ದ ಹತ್ತಾರು ಅಡಿ ಗುಂಡಿಗಳನ್ನು ದಾಟಿ ಬಂದಿರುವ ಇವರಿಂದ ಬಂದಿರುವ ಈ ಮಾತುಗಳು ಅತಿಶಯೋಕ್ತಿಯಂತಿಲ್ಲ! ಇಷ್ಟು ಲಕ್ಷಾಂತರ ಸಂಖ್ಯೆಯಲ್ಲಿ ರೈತರು ಸೇರಿದ್ದರು, ಇಲ್ಲಿಯವರೆಗೂ ಯಾವುದೇ ಅಹಿತಕರ ಘಟನೆಯೂ ಸಂಭವಿಸಿಲ್ಲ. ಹೋರಾಟದ ಕಿಚ್ಚಿದೆ, ಅದರೊಡನೆ ಶಿಸ್ತಿದೆ. ಮತ್ತು ಯಾವುದೇ ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟಲು ಮೊಬೈಲ್ ಶೌಚಾಲಯಗಳನ್ನು ಸಹ ನಿರ್ಮಿಸಿದ್ದಾರೆ. ಸಾರ್ವಜನಿಕ ಆರೋಗ್ಯದ ಕುರಿತು ಸಹ ಆಲೋಚಿಸಿ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದ್ದಾರೆ ಎಂದು ಸಮಗ್ರ ಮಾಹಿತಿಯನ್ನು ಗೋಷ್ಠಿಯಲ್ಲಿ ಹಂಚಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಗುಂಡಮ್ಮ ಮಡಿವಾಳ ಹಾಗೂ ಕಾರ್ಯದರ್ಶಿ ಗೌರಮ್ಮ ಸಿ,ಕೆ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here