ಕಲಬುರಗಿ: ದೇಶದಲ್ಲಿ ರೈತ ಪರವಾಗಿ ಜಾರಿಗೆ ತಂದ ಕಾನೂನುಗಳನ್ನು ಸಹಿಸಿಕೊಳ್ಳಲಾಗದ ಕಾಂಗ್ರೆಸ್ ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನೂತನ ಕೃಷಿ ಕಾಯಿದೆಯಲ್ಲಿರುವ ಅಂಶಗಳು ರೈತರಿಗೆ ಪೂರಕವಾಗಿದ್ದರೂ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಹಬ್ಬಿಸಿ ರೈತರನ್ನು ಸರ್ಕಾರದ ವಿರುದ್ಧ ಎತ್ತಿ ಕಟ್ಟುವ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಚಳುವಳಿ ನಿಜವಾದ ರೈತರ ಚಳುವಳಿಯಲ್ಲ. ಸರ್ಕಾರದ ಎಲ್ಲ ನಿರ್ಧಾರಗಳನ್ನು ಟೀಕಿಸುವುದೇ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ಕಾರ್ಯವಾಗಿದೆ. ಚಳವಳಿಯ ಹಿಂದೆ ಯಾವುದೇ ಜನಹಿತವಿಲ್ಲ ಕೇವಲ ಸರ್ಕಾರವನ್ನು ಟೀಕಿಸಬೇಕು ಎಂಬ ಕಾರಣದಿಂದ ಮಾತ್ರ ಚಳುವಳಿ ನಡೆಸಲಾಗುತ್ತಿದೆ ಎಂದಿದ್ದಾರೆ.
ಖುದ್ದು ಪ್ರಧಾನಮಂತ್ರಿಗಳು ಹಾಗೂ ಕೃಷಿ ಸಚಿವರು ಹಲವಾರು ಸಭೆ, ಸಂಧಾನಗಳು ನಡೆಸಿದ್ದರೂ ಕಾಯಿದೆಯಲ್ಲಿರುವ ನಕಾರಾತ್ಮಕ ಅಂಶಗಳನ್ನು ಹೇಳುವುದಕ್ಕೆ ವಿರೋಧ ಪಕ್ಷಗಳಿಂದ ಸಾಧ್ಯವಾಗುತ್ತಿಲ್ಲ. ಆಳಂದನಲ್ಲಿ ಸೋಮವಾರ ನಡೆದ ರೈತ ಹೋರಾಟ ರೈತರ ಹೋರಾಟವಾಗಿರಲಿಲ್ಲ ಅದು ಕಾಂಗ್ರೆಸ್ ಕಾರ್ಯಕರ್ತರ ಜಾಥಾವಾಗಿತ್ತು ಎಂದು ಟೀಕಿಸಿದ್ದಾರೆ.
ನಿಜವಾದ ರೈತರು ಹೊಲ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ರೈತರ ಹೆಸರಿನಲ್ಲಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ ಆಳಂದ ಮಾಜಿ ಶಾಸಕ ಬಿ ಆರ್ ಪಾಟೀಲರು ಕಳೆದ ಚುನಾವಣೆಯಲ್ಲಿ ಸೋತಾಗಿನಿಂದ ರೈತರನ್ನು ಸರ್ಕಾರದ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ನೂತನ ಕೃಷಿ ಕಾಯಿದೆಯಿಂದ ಕೃಷಿ ಉತ್ಪನ್ನ ಮಾರುಕಟ್ಟೆಗಳು ಬಂದ ಆಗುತ್ತವೆ ಎಂದು ಬಿಂಬಿಸಲಾಗುತ್ತಿದೆ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಈ ಕಾಯಿದೆಯಿಂದ ಎಪಿಎಂಸಿಗಳು ಮತ್ತಷ್ಟೂ ಬಲಶಾಲಿಯಾಗಲಿವೆ ಅಲ್ಲದೇ ರೈತರು ತಾವು ಬೆಳೆದ ಬೆಳೆಗಳನ್ನು ತಮಗೆ ಬೇಕಾದ ಸ್ಥಳದಲ್ಲಿ ಸರಿಯಾದ ಬೆಲೆಗೆ ಮಾರಿಕೊಳ್ಳಬಹುದಾಗಿದೆ ಇಂತಹ ಸಕಾರಾತ್ಮಕ ಅಂಶಗಳಿದ್ದಾಗಿಯೂ ವಿರೋಧ ಮಾಡುವುದು ಸಲ್ಲ ಎಂದು ಹೇಳಿದ್ದಾರೆ.