ಕಲಬುರಗಿ: ಅನೆಕಾಲು ರೋಗ ಮುಕ್ತಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಇದೇ ಜನವರಿ 22 ರಿಂದ 31 ರವರೆಗೆ ಐ.ವಿ.ಆರ್. ಐವರಮೆಕ್ಟಿನ್ ಹಾಗೂ ಡಿ.ಇ.ಸಿ., ಅಲ್ಬೆಂಡಜೋಲ್ ಮಾತ್ರೆಗಳನ್ನು ನುಂಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ ಜ್ಯೋತ್ಸ್ನಾ ತಿಳಿಸಿದರು.
ಕಲಬುರಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಾಮೂಹಿಕ ಔಷಧಿ ಸೇವನೆಯ ಎಂ.ಡಿ.ಎ ಹಾಗೂ ಐ.ಡಿ.ಏ. ಕಾರ್ಯಕ್ರಮದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಡಿ.ಇ.ಸಿ. ಮತ್ತು ಅಲ್ಬೆಂಡಜೋಲ್ ಮಾತ್ರೆಗಳನ್ನು 2 ವರ್ಷದೊಳಗಿನ ಮಕ್ಕಳಿಗೆ ನೀಡಬಾರದು. ಐ.ವಿ.ಆರ್ ಐವರ್‍ಮೆಕ್ಟಿನ್ ಮಾತ್ರೆಯನ್ನು 5 ವರ್ಷದೊಳಗಿನ ಮಕ್ಕಳಿಗೆ ನೀಡಬಾರದು. ಔಷಧಿಗಳನ್ನು ಗರ್ಭಿಣಿಯರಿಗೆ, ಹೃದಯ, ಶ್ವಾಸಕೋಶ, ಮೂತ್ರಪಿಂಡಕ್ಕೆ ಸಂಬಂಧಿಸಿದ ದೀರ್ಘಾವದಿ ಖಾಯಿಲೆಯಿಂದ ಬಳಲುತ್ತಿರುವವರಿಗೆ ಔಷಧಿ ನೀಡುವಂತಿಲ್ಲ. ಎಂ.ಡಿ.ಎ. ಮಾತ್ರೆಗಳು ವಯಸ್ಸಿನ ಆಧಾರದ ಮೇಲೆ ಹಾಗೂ ಐ.ಡಿ.ಏ. ಮಾತ್ರೆಗಳು ಎತ್ತರದ ಆಧಾರದ ಮೇಲೆ ನೀಡಲಾಗುವುದು ಎಂದು ವಿವರಿಸಿದರು.
ಜಿಲ್ಲೆಯಲ್ಲಿನ 1255 ಹಳ್ಳಿಗಳಲ್ಲಿ 107 ಪ್ರಾಥಮಿಕ ಕೇಂದ್ರಗಳು ಹಾಗೂ 336 ಉಪಕೇಂದ್ರಗಳಲ್ಲಿ ಒಬ್ಬರು ಅಂಗನವಾಡಿ ಹಾಗೂ 1 ಆಶಾ ಕಾರ್ಯಕರ್ತೆರ ತಂಡದಿಂದ 10 ದಿನಗಳ ಕಾಲ ಪ್ರತಿದಿನ 25 ಮನೆಗಳಿಗೆ ಐವರಮೆಕ್ಟಿನ್, ಡಿ.ಇ.ಸಿ. ಮತ್ತು ಅಲ್ಬೆಂಡಜೋಲ್ ಒಟ್ಟು ಮೂರು ಮಾತ್ರೆಗಳನ್ನು ನುಂಗಿಸಲಾಗುವುದು. ಸುಮಾರು 250 ಮನೆಗಳಲ್ಲಿ 1500 ಜನರಿಗೆ ಮಾತ್ರೆ ನುಗಿಸುವ ಗುರಿ ಹೊಂದಿದ್ದು, 5900 ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.
ಚಿಕ್ಕ ಮಕ್ಕಳಿಗೆ ಮಾತ್ರೆ ನೀಡುವಾಗ ತರಬೇತಿ ಪಡೆದುಕೊಂಡು ಕಾರ್ಯಕರ್ತೆಯರು ಔಷಧಿ ನೀಡಬೇಕು. ಜನರಿಗೆ ಸರಿಯಾದ ಮಾಹಿತಿ ನೀಡಬೇಕು. ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಐ.ವಿ.ಆರ್ ಮಾತ್ರೆ : ಸುಮಾರು 18 ರೋಗಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಐ.ವಿ.ಆರ್. ಐವರ್‍ಮೆಕ್ಟನ್ ಮಾತ್ರಗಳು ಈಗಾಗಲೇ ಯಾದಗಿರಿ ಜಿಲ್ಲೆ ಹಾಗೂ ಪಾಂಡಿಚೇರಿಯಲ್ಲಿ ವಿತರಣೆ ಮಾಡಿ ಯಶಸ್ವಿಯಾಗಿದ್ದು, ಪ್ರಸ್ತುತ 2021ನೇ ವರ್ಷದಿಂದ ಜಿಲ್ಲೆಯ 7 ತಾಲೂಕಿನ ಜನರಿಗೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದರು.
ಇದೇ ವೇಳೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ ಮಾತನಾಡಿ, ಜನರಲ್ಲಿ ಆನೆಕಾಲು ರೋಗದ ಬಗ್ಗೆ ಅರಿವು ಮೂಡಿಸಿ ಮಾತ್ರೆಗಳನ್ನು ನೀಡಿ. ಯಾವುದೇ ತೊಂದರೆ ಉಂಟಾದರೆ ಅಧಿಕಾರಿಗಳು, ಸಿಬ್ಬಂದಿಗಳು ತಕ್ಷಣ ಸ್ಪಂದಿಸಬೇಕು ಎಂದು ಅವರು ಸೂಚಿಸಿದರು.
ಕಾರ್ಯಕ್ರಮದಲ್ಲಿ ಆನೆಕಾಲು ರೋಗದ ಬಗ್ಗೆ ಅರಿವು ಮೂಡಿಸಲು ಮನೆಯ ಗೋಡೆಗಳಿಗೆ ಪೋಸ್ಟರ್ (ಭಿತ್ತಿಪತ್ರ) ಕರಪತ್ರಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಶೇಖರ ಮಾಲಿ, ಜಿಲ್ಲಾ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಬಸವರಾಜ ಗುಳಗಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಪಿ. ಬಾಡಂಗಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶಿವಶರಣಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಆರೋಗ್ಯ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೀಟಶಾಸ್ತ್ರಜ್ಞ ಚಾಮರಾಜ ದೊಡ್ಡಮನಿ ಅವರು ಪಿಪಿಟಿ ಮೂಲಕ ಮಾಹಿತಿ ನೀಡಿದರು.