ಶಹಾಬಾದ : ದಕ್ಷಿಯಾಣದಿಂದ ಉತ್ತರಾಯಣ ಪ್ರವೇಶಿಸುವ ಕಾಲದ ಆರಂಭ ಹೇಳುವ ವರ್ಷದ ಮೊದಲ ಹಬ್ಬ ಮಕರ ಸಕ್ರಾಂತಿ ಹಬ್ಬವನ್ನು ಗುರುವಾರ ಸಡಗರ ಸಂಭ್ರಮದಿಂದದ ಆಚರಿಸಿದರು.
ಮಕರ ಸಂಕ್ರಮಣದ ನಿಮಿತ್ತ ಮುಂಜಾನೆ ಬೇಗ ಎದ್ದು ಮೈಗೆಲ್ಲ ಎಳ್ಳು ಚಟ್ಟನ್ನು ಹಚ್ಚಿಕೊಂಡು ಸ್ನಾನ ಮಾಡಿ ಹಿರಿಯರು, ಮಹಿಳೆಯರು ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಅಲ್ಲದೇ ಪ್ರತಿ ವರ್ಷದಂತೆ ಈ ವರ್ಷವೂ ಸುತ್ತಮುತ್ತಲಿನ ಭಂಕೂರ, ಮುತ್ತಿಗಿ, ರಾವೂರ, ಮಾಲಗತ್ತಿ, ತೊನಸಿನ ಹಳ್ಳಿ, ಮರತೂರ, ತೆಗನೂರ, ಕಿರಣಗಿ, ಗೋಳಾದ ಸಾವಿರಾರು ಜನರು ಪುಣ್ಯ ಸ್ನಾನ ಮಾಡಲು ಕಾಗಿಣಾ ನದಿಯ ದಡದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದು ಕಂಡು ಬಂದಿತು.ಅಲ್ಲದೇ ನದಿ ದಡದಲ್ಲಿ ಉಲ್ಲಾಸಕ್ಕಾಗಿ ಸಾರ್ವಜನಿಕರು ಹಗ್ಗಜಗ್ಗಾಟ, ಗಾಳಿ ಪಟ ಹಾರಿಸುವುದು, ಕುಸ್ತಿ ಆಡುತ್ತಿರುವುದು ಕಂಡು ಬಂದಿತು.
ಕಳೆದ ವರ್ಷ ನದಿಯಲ್ಲಿ ಅಷ್ಟೊಂದು ನೀರಿಲ್ಲದ ಪರಿಣಾಮ ಯಾರು ನದಿ ಕಡೆಗೆ ಪ್ರಯಾಣ ಬಯಸಿರಲಿಲ್ಲ. ಆದರೆ ಈ ಬಾರಿ ನದಿಯಲ್ಲಿ ಸಾಕಷ್ಟು ನೀರಿರುವುದರಿಂದ ಜನರು ತಮಗೆ ಬೇಕಾದ ಸ್ಥಳಗಳಲ್ಲಿ ಸ್ನಾನ ಮಾಡಿದರು. ನಂತರ ನದಿಯ ತಟದಲ್ಲಿ ಕುಳಿತು ಬಂದು ಭಾಂದವರು ಹಾಗೂ ಗೆಳೆಯರೊಂದಿಗೆ ಸಿಹಿ-ಭಕ್ಷ್ಯ ಬೋಜನಗಳನ್ನು ಸವಿದು ಮಕರ ಸಂಕ್ರಮಣ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ಕೆಲವು ಜನರು ಗೆಳೆಯರೊಂದಿಗೆ ಕುಟುಂಬದವರೊಂದಿಗೆ ಕೂಡಲಸಂಗಮ, ಗಣಗಾಪೂರ, ಸನ್ನತಿಗೆ ತೆರಳಿದರು. ಈ ಹಬ್ಬದ ಪ್ರಮುಖ ಆಕರ್ಷಣೆಯೆಂದರೆ ಎಳ್ಳು ಕೊಡುವ ಸಂಪ್ರದಾಯ. ಸಂಜೆ ತಂದೆ,ತಾಯಿ, ಬಂದುಭಾಂದವರಿಗೆ ಹಾಗೂ ಸ್ನೇಹಿತರಿಗೆ ಕುಸುರೆಳ್ಳು ಕೊಟ್ಟು “ ಎಳ್ಳೂ ಬೆಲ್ಲ ತೆಗೆದುಕೊಂಡು ಒಳ್ಳೊಳ್ಳೆಯ ಮಾತಾಡೋಣ ಹಾಗೂ ಎಳ್ಳೂ ಬೆಲ್ಲದಂಗಿರೋಣ ’’ ಎಂದು ಚಿಕ್ಕವರೆಲ್ಲ ದೊಡ್ಡವರಿಗೆಲ್ಲರಿಗೂ ಎಳ್ಳು ಕೊಟ್ಟು ಕಾಲಿಗೆ ನಮಸ್ಕರಿಸಿ ನಮ್ಮ ಸಂಸ್ಕೃತಿಯ ಉಳಿಸುವ ಹಬ್ಬದ ಆಚರಣೆಗಳನ್ನು ಹರ್ಷದಿಂದ ಆಚರಿಸಿದರು.ಅಲ್ಲದೇ ಹಬ್ಬದ ದಿನದಂದು ಕುಟುಂಬದ ಸದಸ್ಯರೊಂದಿಗೆ ದೇವಸ್ಥಾನಗಳಿಗೆ ದೇವರ ದರ್ಶನ ಪಡೆದರು.