ಕಲಬುರಗಿ: ಕೇಂದ್ರ ಸರ್ಕಾರದ ಕಾರ್ಪೋರೇಟ್ ಪರ ಕರಾಳ ಕೃಷಿ ಕಾಯ್ದೆಗಳ ಹಿಮ್ಮೆಟ್ಟಿಸುವಂತೆ ಜಿಲ್ಲಾದ್ಯಂತ 16 ರಿಂದ 20 ಕ್ಕೆ ಜೀಪ್ ಜಾಥಾಕ್ಕೆ ಇಂದು ರೈತ-ಕೃಷಿಕಾರ್ಮಿಕರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಹೆಚ್. ವ್ಹಿ. ದಿವಾಕರ್ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಅನ್ವಯವಾಗುವಂತೆ ಕೃಷಿ ಮಸೂದೆಗಳಿಗೆ ತಿದ್ದುಪಡಿ ತಂದಿದೆ. ಈ ತಿದ್ದುಪಡಿಗಳು ದೇಶದ ಕೃಷಿ ಬೆಳವಣಿಗೆಗೆ ಪೂರಕವಾಗಿವೆ ಎಂದು ಸರ್ಕಾರ ಬಿಂಬಿಸುತ್ತಿದೆ. ಇನ್ನೊಂದೆಡೆ, ಇದು ರೈತರ ಹಿತಕ್ಕೆ ಮಾರಕವಾಗಿದ್ದು, ಅವರ ಬದುಕುವ ಹಕ್ಕನ್ನೇ ಕಸಿದುಕೊಂಡು, ಅವರನ್ನು ನಿರ್ಗತಿಕರನ್ನಾಗಿಸಲು ಹೊರಟಿದೆ. ಮತ್ತು ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಬಂಡವಾಳಿಗರ ಲಾಭದ ಕಾರ್ಖಾನೆಯನ್ನಾಗಿ ಪರಿವರ್ತಿಸಲು ಸರ್ಕಾರ ಟೊಂಕಕಟ್ಟಿ ನಿಂತಿದೆ ಎಂದು ಆರೋಪಿಸಿದರು.
ಅಗತ್ಯ ವಸ್ತುಗಳ ಕಾಯ್ದೆ ೧೯೫೫ ರ ಪ್ರಕಾರ ಆಹಾರ ಪದಾರ್ಥಗಳನ್ನು ನಿಗದಿತ ಪರಿಮಿತಿಗಿಂತ ಹೆಚ್ಚಾಗಿ ದಾಸ್ತಾನು ಮಾಡುವುದು ಅಪರಾಧವಾಗಿತ್ತು. ಆದರೆ ಇದೀಗ, ಸರ್ಕಾರ ಈ ಕಾಯ್ದೆಗೆ ತಿದ್ದುಪಡಿ ತಂದು ಈ ಪರಿಮಿತಿಯನ್ನು ತೆಗೆದುಹಾಕಿದೆ. ಇದರ ಪರಿಣಾಮವಾಗಿ, ಹಣವಂತರು, ಬಂಡವಾಳಿಗರು ಮತ್ತು ಕೃಷಿ ಕಾರ್ಪೋರೇಟ್‌ಗಳು ಅಗತ್ಯ ವಸ್ತುಗಳನ್ನು ಅತೀ ಕಡಿಮೆ ಬೆಲೆಗೆ ಎಗ್ಗಲ್ಲದೇ ಖರೀದಿಸಿ ದಾಸ್ತಾನು ಮಾಡಿ, ಕೃತಕ ಅಭಾವ ಸೃಷ್ಠಿಸುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಕಂಪೆನಿಗಳು ಮನಸೋಯಿಚ್ಚೆ ಬೆಲೆ ಏರಿಸಿ ಜನರನ್ನು ಸುಲಿಗೆ ಮಾಡಲು ಈ ತಿದ್ದುಪಡಿಯು ಕಾಳಸಂತೆಕೋರರಿಗೆ ಮುಕ್ತ ಅವಕಾಶ ನೀಡುತ್ತದೆ. ಎರಡನೇಯದಾಗಿ, ಮಧ್ಯವರ್ತಿಗಳು ಮತ್ತು ದಳ್ಳಾಳಿಗಳಿಂದ ಆಗುತ್ತಿರುವ ವಂಚನೆಯಿಂದ ರೈತರಿಗೆ ರಕ್ಷಣೆ ನೀಡುವ ನೆಪದಲ್ಲಿ ಹಿಂದೆ ಜಾರಿಯಲ್ಲಿದ್ದ ಎಪಿಎಂಸಿ ಕಾಯ್ದೆಯನ್ನು ಅನೂರ್ಜಿತಗೊಳಿಸಿ, ರೈತರ ಉತ್ಪನ್ನಗಳ ವಾಣಿಜ್ಯ ವ್ಯಾಪಾರ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಈ ಕಾಯ್ದೆಯು ಉದ್ಯಮಿಗಳಿಗೆ ಖಾಸಗೀ ಮಂಡಿಗಳನ್ನು ತೆರೆಯಲು ಅವಕಾಶ ನೀಡುತ್ತದೆ. ರೈತರು ಖಾಸಗೀ ಮಂಡಿಗೆ ತಮ್ಮ ಬೆಳೆಯನ್ನು ಒಯ್ದು ಮಾರಿದರೆ, ಯಾವುದೇ ಕಮೀಷನ್ ಕಟ್ಟಬೇಕಿಲ್ಲ, ಆದರೆ ಸರ್ಕಾರಿ ಎಪಿಎಂಸಿ ಮಂಡಿಯಲ್ಲಿ ಮಾರಿದರೆ ಶೇ% ೧.೩೫ ರಷ್ಟು ಕಮೀಷನ್ ಕಟ್ಟಬೇಕು ಎಂದು ನಿರ್ಧರಿಸುವ ಮೂಲಕ, ಸರ್ಕಾರ ಬಹಿರಂಗವಾಗಿ ಖಾಸಗೀ ಉದ್ಯಮಿಗಳಿಗೆ ಗರಿಷ್ಠ ಲಾಭಗಳಿಸಲು ಅವಕಾಶ ಮಾಡಿಕೊಡುತ್ತಿದೆ. ಜೊತೆಗೆ, ಕಾಲಕ್ರಮೇಣ ಸರ್ಕಾರಿ ಎಪಿಎಂಸಿ ವ್ಯವಸ್ಥೆಯು ತನ್ನಿಂದ ತಾನೆ ನಶಿಸಿಹೋಗುವಂತ ಪರಿಸ್ಥಿತಿಯನ್ನು ಸೃಷ್ಠಿಸುವುದೇ ಈ ತಿದ್ದುಪಡಿಯ ಹಿಂದಿನ ಹುನ್ನಾರವಾಗಿದೆ. ಈ ಒಳಸಂಚನ್ನು ರೈತರು ಅರ್ಥಮಾಡಿಕೊಳ್ಳಬೇಕು. ಬೆಳೆ ಮಾರಾಟದಲ್ಲಿ ರೈತರಿಗೆ ಈಗ ಲಭ್ಯವಿರುವ ಅಲ್ಪಸ್ವಲ್ಪ ರಕ್ಷಣೆಯು ಇನ್ನು ಮುಂದೆ ಇಲ್ಲವಾಗುತ್ತದೆ. ಬೆಳೆ ಖರೀದಿಯಲ್ಲಿ ಉದ್ಯಮಿಗಳು ರೈತರನ್ನು ಇನ್ನೂ ಹೆಚ್ಚಾಗಿ ವಂಚಿಸಲು ಶುರು ಮಾಡುತ್ತಾರೆ. ಅದಲ್ಲದೇ, ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಸೌಲಭ್ಯವೂ ಇಲ್ಲದಂತಾಗುತ್ತದೆ. ಜೊತೆಗೆ, ರೈತರು ಕಾರ್ಪೋರೇಟ್ ಕಂಪನಿಗಳ, ಬಹುರಾಷ್ಟ್ರೀಯ ಕಂಪನಿಗಳ ಮೋಸ, ವಂಚನೆಯ ಬಲೆಯಲ್ಲಿ ಸಿಲುಕುತ್ತಾರೆ ಎಂದರು.
ಕೃಷಿ ಉತ್ಪನ್ನಗಳ ಬೆಲೆ ಮತ್ತು ಕೃಷಿ ಸೇವೆಗಳ ಕುರಿತಾದ ರೈತರ ಒಪ್ಪಂದ ಎಂಬ ಹೊಸ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಏರುತ್ತಿರುವ ಕೃಷಿ ಖರ್ಚಿನಿಂದ ರೈತರು ಈಗಾಗಲೇ ಹೈರಾಣಾಗಿದ್ದು, ಪ್ರತಿವರ್ಷ ನಷ್ಟ ಅನುಭವಿಸುತ್ತಿರುವ ರೈತರಿಗೆ ಈ ಕಾಯ್ದೆ ಒಂದು ಪರ್ಯಾಯ ಪರಿಹಾರವೆಂಬಂತೆ ಬಿಂಬಿಸಲಾಗುತ್ತಿದೆ. ಆದರೆ, ಈ ಕಾಯ್ದೆಯ ಲಾಭಪಡೆಯಲು ಕಾಪೋರೇಟ್ ಕೃಷಿ ಕಂಪನಿಗಳು, ಗುತ್ತಿಗೆ ಕೃಷಿ ಒಪ್ಪಂದ ಮಾಡಿಕೊಳ್ಳಲು ರೈತರನ್ನು ಪುಸಲಾಯಿಸಿ, ಸಾವಿರಾರು ಹೆಷ್ಟೇರ್ ಭೂಮಿಯನ್ನು ಭೋಗ್ಯಕ್ಕೆ ಹಾಕಿಕೊಂಡು, ತಾವು ಸೂಚಿಸಿದ ಬೆಳೆಯನ್ನೇ ಬೆಳೆಯಬೇಕೆಂದು ನಿರ್ದೇಶಿಸುತ್ತಾರೆ. ಬೆಳೆ ಕೋಯ್ಲಿಗೆ ಬಂದ ಸಂದರ್ಭದಲ್ಲಿ ಗುಣಮಟ್ಟ, ಇಳುವರಿ ಮತ್ತಿತರ ನೆಪವೊಡ್ಡಿ ಹಣಪಾವತಿ ಮಾಡದೇ ರೈತರನ್ನು ಸತಾಯಿಸುತ್ತಾರೆ ಎಂದು ತಿಳಿಸಿದರು.
ಜೊತೆಗೆ, ಈ ಕಾಯ್ದೆಯ ಮೂಲಕ ಕೃಷಿಯನ್ನು ಬೃಹತ್ ಖಾಸಗೀ ಕಂಪನಿಗಳ ನಿಯಂತ್ರಣಕ್ಕೆ ಒಡ್ಡಲಾಗುತ್ತದೆ. ರೈತರ ಜೀವನೋಪಾಯದ ಏಕೈಕ ಸಾಧನವಾಗಿರುವ ಕೃಷಿ ಭೂಮಿಯನ್ನು ಅವರಿಂದ ಕಿತ್ತುಕೊಳ್ಳಲಾಗುತ್ತದೆ. ಇದರ ಪರಿಣಾಮದಿಂದಾಗಿ, ರೈತರು ಸಂಪೂರ್ಣವಾಗಿ ತಮ್ಮ ಸ್ವಾತಂತ್ರ್ಯ ಕಳೆದುಕೊಂಡು ನಡೆದಾಡುವ ಹೆಣಗಳಂತೆ ಕಂಪನಿಗಳ ಹಂಗಿನಲ್ಲಿ ಬದುಕಬೇಕಾಗುತ್ತದೆ! ಇದೇ ಕಾರಣಕ್ಕಾಗಿಯೇ ಈ ಕಾಯ್ದೆಗಳ ವಿರುದ್ದ ರೈತರು ಧ್ವನಿ ಎತ್ತುತ್ತಿದ್ದಾರೆ ಎಂದು ತಿಳಿಸಿದರು.
ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವೂ ಸಹ ಎಪಿಎಂಸಿ ಕಾಯ್ದೆಯನ್ನು ಅನೂರ್ಜಿತಗೊಳಿಸುವ ಕಾನೂನು, ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ, ವಿದ್ಯುತ್ ಕಾಯ್ದೆಗೆ ತಿದ್ದುಪಡಿ ಮತ್ತು ಬೀಜ ಕಾಯ್ದೆ ಮುಂತಾದವನ್ನು ರೈತರ ತೀವ್ರ ವಿರೋಧವನ್ನು ಬದಿಗೊತ್ತಿ ಜಾರಿಗೆ ತರಲು ಯತ್ನಿಸುತ್ತಿದೆ ಎಂದು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿಯವರೆಗೂ ದೇಶವನ್ನಾಳಿದ ಕಾಂಗ್ರೇಸ್ (ಐ), ಬಿಜೆಪಿ ಪಕ್ಷಗಳು ರೈತರ ಪರ ಘೋಷಣೆಗಳನ್ನು ಎತ್ತುತ್ತಲೇ ರೈತರ ಜೀವನವನ್ನು ಸರ್ವನಾಶ ಮಾಡಿವೆ. ಈಗ ಕೇಂದ್ರ ಸರ್ಕಾರವು ಕೃಷಿ ವಿರೋಧಿ ನೀತಿಗಳನ್ನು ಜಾರಿಗೆ ತಂದಿದ್ದು ಎಲ್ಲಾ ಸರ್ಕಾರಗಳು ಕೇವಲ ಕಾರ್ಪೋರೇಟ್ ಬಂಡವಾಳಗಾರರ ಪರವಾಗಿವೆ ಎಂಬ ಕಟು ಸತ್ಯವನ್ನು ಬಹಿರಂಗಗೊಳಿಸಿದೆ. ಇದರಿಂದ ಯಾವ ಪಕ್ಷಗಳು ಜನಪರವಾಗಿಲ್ಲ ಎಂಬುದು ಮನವರಿಕೆಯಾಗಿದೆ. ಆದ್ದರಿಂದ, ಕಾಂಗ್ರೇಸ್, ಬಿಜೆಪಿ ಸೇರಿದಂತೆ ಎಲ್ಲಾ ಬಂಡವಾಳಶಾಹಿ ಪಕ್ಷಗಳನ್ನು ಸಹ ಈ ದೇಶದ ರೈತರು, ಕೃಷಿ ಕಾರ್ಮಿಕರು ತಿರಸ್ಕರಿಸಬೇಕಿದೆ. ಬೇರೆಲ್ಲಾ ದುಡಿಯುವ ಜನರನ್ನು ಸಂಘಟಿಸಿ, ಈ ಅನ್ಯಾಯಗಳ ವಿರುದ್ಧ ರಾಜೀರಹಿತ ಹೋರಾಟ ಕಟ್ಟಲು ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ, ವಿದ್ಯಾರ್ಥಿ-ಯುವಜನರಿಗೆ ಮುಂಬರಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿ.ಜಿ. ದೇಸಾಯಿ, ಎಸ್. ಎಂ. ಶರ್ಮಾ, ಡಾ|| ಸೀಮಾ ದೇಶಪಾಂಡೆ, ಹಣಮಂತ ಎಸ್.ಹೆಚ್., ಈರಣ್ಣಾ ಇಸಬಾ, ಸ್ನೇಹಾ ಕಟ್ಟಿಮನಿ, ರಾಧಾ ಜಿ., ಶಿಲ್ಪಾ ಬಿ.ಕೆ., ಪ್ರೀತಿ ದೊಡಮನಿ, ಭೀಮಾಶಂಕರ್ ಆಂದೋಲಾ, ಪ್ರೀತಿ ಇಂಗಳಗಿ, ನಾಗರಾಜ ರವರನ್ನೊಳಗೊಂಡು ಹಲವಾರು ಜನ ಉಪಸ್ಥಿತರಿದ್ದರು.