ಕಲಬುರಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ದುಡಿಯುವ ಕೈಗಳಿಗೆ ಕೆಲಸ ನೀಡುವ ಒಂದು ಮಹತ್ವದ ಯೋಜನೆಯಾಗಿದ್ದು, ಮಹಿಳೆಯರು ಮತ್ತು ಪುರುಷರಿಗೆ ಸಮಾನ ವೇತನ ನೀಡಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಯೋಜನೆಯ ಲಾಭ ಪಡೆಯಬೇಕು ಎಂದು ಅಫಜಲಪೂರ ತಾಲೂಕು ಪಂಚಾಯತಿಯ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ರಮೇಶ ಪಾಟೀಲ್ ಹೇಳಿದರು.
ಶನಿವಾರ ಅಫಜಲಪುರ ತಾಲೂಕು ವ್ಯಾಪ್ತಿಯ ಅಳ್ಳಗಿ ಬಿ. ಮತ್ತು ಉಡಚಣ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಮಹಿಳೆಯರು ಭಾಗವಹಿಸಲು ಉತ್ತೇಜಿಸುವ “ಮಹಿಳಾ ಕಾಯಕೋತ್ಸವ” ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನರೇಗಾ ಯೋಜನೆಯಲ್ಲಿ ಹೆಚ್ಚು ಮಹಿಳೆಯರು ಪಾಲ್ಗೊಳ್ಳುವಂತೆ ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯು ಜನವರಿ 15 ರಿಂದ ಮಾರ್ಚ್ 15ರ ವರೆಗೆ ತಾಲೂಕಿನ 10 ಗ್ರಾಮ ಪಂಚಾಯತಗಳಲ್ಲಿ ಮಹಿಳಾ ಕಾಯಕೋತ್ಸವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಐಇಸಿ ಸಂಯೋಜಕರು, ಸಾಮಾಜಿಕ ಲೆಕ್ಕ ಪರಿಶೋಧನಾ ಸಂಯೋಜಕರು, ಎನ್.ಆರ್.ಎಲ್.ಎಂ. ತಾಲೂಕು ಸಂಯೋಜಕರು, ಆಶಾ-ಅಂಗನವಾಡಿ ಕಾರ್ಯಕರ್ತರು, ಸ್ವ-ಸಹಾಯ ಸಂಘದ ಮಹಿಳೆಯರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.