ಕಲಬುರಗಿ: ದೇಶಾದ್ಯಂತ ಬಹು ನಿರೀಕ್ಷಿತ ಮೊದಲ ಹಂತದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ಕೊರೋನಾ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸನ್ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಿದ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಲ್ಲೂ ಒಟ್ಟು 8 ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡಿಕೆಗೆ ಚಾಲನೆ ನೀಡಲಾಯಿತು.
ಗುಲಬರ್ಗಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದ ಲಸಿಕೆ ನೀಡುವ ಚಾಲನಾ ಕಾರ್ಯಕ್ರಮದಲ್ಲಿ ಪ್ರಥಮವಾಗಿ ಜಿಮ್ಸ್ ಆಸ್ಪತ್ರೆಯ ಗ್ರೂಪ್ ‘ಡಿ’ ಸಿಬ್ಬಂದಿ ಅನಂತರಾಜ್ (38) ಅವರಿಗೆ ಲಸಿಕೆ ಹಾಕಲಾಯಿತು.
ಈ ಸಂದರ್ಭದಲ್ಲಿ ಸಂಸದ ಡಾ.ಉಮೇಶ್ ಜಾಧವ್, ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ದತ್ತಾತ್ರೇಯ ಪಾಟೀಲ ಸಿ. ರೇವೂರ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಶಾಸಕರಾದ ಬಸವರಾಜ ಮತ್ತಿಮೂಡು, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್, ಜಿ.ಪಂ. ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ, ಜಿ.ಪಂ. ಸಿಇಒ ಡಾ.ಪಿ.ರಾಜಾ, ಡಿಸಿಪಿ ಡಿ. ಕಿಶೋರ್ ಬಾಬು, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾದ ಸ್ನೇಹಲ್ ಸುಧಾಕರ್ ಲೋಖಂಡೆ, ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಕವಿತಾ ಪಾಟೀಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ್ ಮಾಲಿ ಮತ್ತಿತರ ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ, ಡಿಸಿ ವಿ.ವಿ. ಜೋತ್ಸ್ನಾ ಅವರು ಗುಲಬರ್ಗಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಲಸಿಕೆ ನೀಡುವಿಕೆಗೆ ಸಂಬಂಧಿಸಿದ ಸಿದ್ಧತೆಗಳನ್ನು ಪರಿಶೀಲಿಸಿದರು. ಇಲ್ಲಿನ ಕೊರೋನಾ ಲಸಿಕೆ ಕೇಂದ್ರ ಹಾಗೂ ಲಸಿಕೆ ಹಾಕಿಸಿಕೊಳ್ಳುವವರ ನೋಂದಣಿ ಕೊಠಡಿಯನ್ನು ವೀಕ್ಷಿಸಿ, ಸಿಬ್ಬಂದಿ ಬಳಿ ಮಾಹಿತಿ ಪಡೆದುಕೊಂಡರು.