ಕಲಬುರಗಿ: ಜಿಲ್ಲೆಯಲ್ಲಿ ಮೊದಲ ಹಂತದ ಕೊರೋನಾ ಲಸಿಕೆಯನ್ನು ಒಟ್ಟು 8 ಕೇಂದ್ರಗಳಲ್ಲಿ 393 ಆರೋಗ್ಯ ಸಿಬ್ಬಂದಿಗೆ ಹಾಕಿದ್ದು, ಲಸಿಕೆಯಿಂದ ನಾಲ್ವರಿಗೆ ಅಲ್ಪ ಪ್ರಮಾಣದಲ್ಲಿ ಅಡ್ಡಪರಿಣಾಮ ಬೀರಿದ್ದು ಬಿಟ್ಟರೆ, ಉಳಿದಂತೆ ಲಸಿಕೆ ನೀಡುವ ಕಾರ್ಯ ಯಶಸ್ವಿಯಾಗಿ ನಡೆದಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಟ್ಟು ಜಿಲ್ಲೆಯಲ್ಲಿ 778 ಫಲಾನುಭವಿಗಳ ಪೈಕಿ 393 ಫಲಾನುಭವಿಗಳಿಗೆ ಲಸಿಕೆ ಹಾಕುವ ಮೂಲಕ ಶೇ.50.51ರಷ್ಟು ಗುರಿ ಸಾಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಆವರಣದಲ್ಲಿರುವ ವಾರ್ ರೂಂ (ಕಂಟ್ರೋಲ್ ರೂಂ)ಗೆ ಭೇಟಿ ನೀಡಿದ ಅವರು ಅಂಕಿ-ಅಂಶಗಳನ್ನು ಪರಿಶೀಲಿಸಿ ಮಾಹಿತಿ ನೀಡಿದ್ದಾರೆ.
ತಾಲೂಕುವಾರು ಲಸಿಕೆ ವಿವರ: ಗುಲಬರ್ಗಾ ವೈದ್ಯಕೀಯ ಮಹಾವಿದ್ಯಾಲಯ ಕೇಂದ್ರ-47, ಅಫಜಲಪುರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ-50, ಆಳಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ-42, ಸೇಡಂ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ-57, ಚಿತ್ತಾಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ-30, ಜೇವರ್ಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ-80, ಚಿಂಚೋಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ-50, ಗೊಬ್ಬೂರು(ಬಿ) ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಿಹೆಚ್‍ಸಿ-37 ಆರೋಗ್ಯ ಸಿಬ್ಬಂದಿಗೆ ಕೋವಿಡ್ ಲಸಿಕೆ ಹಾಕಲಾಗಿದೆ ಎಂದು ಅಂಕಿ-ಅಂಶ ಸಹಿತ ಮಾಹಿತಿ ನೀಡಿದ್ದಾರೆ.
ನೋಂದಾಯಿತ ಆರೋಗ್ಯ ಸಿಬ್ಬಂದಿ ಪೈಕಿ ಕೆಲವರು ಕೇಂದ್ರ ಸ್ಥಾನದಲ್ಲಿ ಇಲ್ಲದಿರುವುದು, ಅನಾರೋಗ್ಯ ಹಿನ್ನೆಲೆ, ಕರ್ತವ್ಯದ ಹಿನ್ನೆಲೆಯಲ್ಲಿ ಬೇರೆ ಆಸ್ಪತ್ರೆಗಳಿಗೆ ನಿಯೋಜನೆ ಮುಂತಾದ ಕಾರಣಗಳಿಂದÀ ಲಸಿಕೆ ಪಡೆದಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಲಸಿಕೆ ಪಡೆದ ಫಲಾನುಭವಿಗಳನ್ನು ಆಯಾ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾದ ತಜ್ಞ ವೈದ್ಯರ ವೀಕ್ಷಣಾ ಕೊಠಡಿಯಲ್ಲಿ ಒಳಗೊಂಡಂತೆ 30 ನಿಮಿಷಗಳ ಕಾಲ ಇರಿಸಿ ಅಡ್ಡಪರಿಣಾಮ ಕುರಿತು ನಿಗಾವಹಿಸಲಾಯಿತು. ಚಿಂಚೋಳಿ ಕೇಂದ್ರಲ್ಲಿ ಮೂವರಿಗೆ ಮತ್ತು ಆಳಂದ ಆರೋಗ್ಯ ಕೇಂದ್ರದಲ್ಲಿ ಓರ್ವರಿಗೆ ಅಲ್ಪಪ್ರಮಾಣದ ಲಕ್ಷಣಗಳು ಕೆಲಹೊತ್ತು ಕಾಣಸಿಕೊಂಡಿತ್ತು. ನಂತರ ಲಸಿಕೆ ಪಡೆದ ಫಲಾನುಭವಿಗಳು ಚೇತರಿಸಿಕೊಂಡರು ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಅವರು ವಿವರಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ, ವಾರ್‍ರೂಂನ(ಕಂಟ್ರೋಲ್ ರೂಂ) ನಿರ್ವಹಣೆಯ ಉಸ್ತುವಾರಿ ಹೊತ್ತಿದ್ದ ಕಲಬುರಗಿ ಸಹಾಯಕ ಆಯುಕ್ತ ಬಲರಾಮ ಲಮಾಣಿ, ಐ.ಎ.ಎಸ್. ಪ್ರೊಬೇಷನರಿ ಅಧಿಕಾರಿ ಡಾ.ಆಕಾಶ್ ಶಂಕರ್, ಡಬ್ಲ್ಯೂಹೆಚ್‍ಓ ಪ್ರತಿನಿಧಿ ಡಾ.ಅನಿಲ್ ತಾಳಿಕೋಟೆ, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಪ್ರಭುಲಿಂಗ ಮಾನಕರ, ಕಂಟ್ರೋಲ್ ರೂಂನ ವಿಶೇಷಾಧಿಕಾರಿ ಡಾ.ಎಂ.ಕೆ.ಪಾಟಿಲ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.