ಕಲಬುರಗಿ: ಜಿಲ್ಲೆಯಲ್ಲಿ ಎರಡನೇ ದಿನದ (ಸೋಮವಾರ) ಕೊರೋನಾ ಲಸಿಕೆಯನ್ನು ಒಟ್ಟು 35 ಕೇಂದ್ರಗಳಲ್ಲಿ 1306 ಜನ ಆರೋಗ್ಯ ಸಿಬ್ಬಂದಿಗೆ ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಅವರು ತಿಳಿಸಿದರು.
ಒಟ್ಟು 2518 ಫಲಾನುಭವಿಗಳ ಪೈಕಿ 1306 ಜನರಿಗೆ ಲಸಿಕೆ ನೀಡಲಾಗಿದ್ದು, ಈ ಮೂಲಕ ಶೇ.50.90 ರಷ್ಟು ಲಸಿಕೆ ಹಾಕಲಾಗಿದೆ. ನೋಂದಣಿ ಮಾಡಿಕೊಂಡಿರುವ ಕೆಲವು ಸಿಬ್ಬಂದಿಗಳು ಬೇರೆ ಕಡೆ ಕರ್ತವ್ಯಕ್ಕೆ ಹಾಜರಾದ ಹಿನ್ನೆಲೆ ಹಾಗೂ ಮತ್ತಿತರ ಕಾರಣಗಳಿಂದ 1260 ಆರೋಗ್ಯ ಸಿಬ್ಬಂದಿಗಳು ಲಸಿಕೆ ಪಡೆದಿರುವುದಿಲ್ಲ ಎಂದರು.
ತಾಲೂಕುವಾರು ಲಸಿಕೆ ವಿವರ: ಕಲಬುರಗಿಯ 8 ಕೇಂದ್ರಗಳಲ್ಲಿ- 369 ಸಿಬ್ಬಂದಿಗೆ, ಅಫಜಲಪುರ ತಾಲೂಕಿನ 5 ಕೇಂದ್ರದಲ್ಲಿ- 219, ಆಳಂದ ತಾಲೂಕಿನ 6 ಕೇಂದ್ರದಲ್ಲಿ- 180, ಸೇಡಂ ತಾಲೂಕಿನ 4 ಕೇಂದ್ರಗಳಲ್ಲಿ- 132, ಚಿತ್ತಾಪುರ ತಾಲೂಕಿನ 4 ಕೇಂದ್ರಗಳಲ್ಲಿ- 142, ಜೇವರ್ಗಿ ತಾಲೂಕಿನ 4 ಕೇಂದ್ರದಲ್ಲಿ- 147, ಚಿಂಚೋಳಿ ತಾಲೂಕಿನ 4 ಕೇಂದ್ರಗಳಲ್ಲಿ- 137 ಸೇರಿ ಒಟ್ಟು 1306 ಜನ ಆರೋಗ್ಯ ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಲಸಿಕೆ ಪಡೆದ ನಂತರ ಆರೋಗ್ಯ ಸಿಬ್ಬಂದಿಗಳನ್ನು ತಜ್ಞ ವೈದ್ಯರನ್ನೊಳಗೊಂಡ ವೀಕ್ಷಣಾ ಕೊಠಡಿಯಲ್ಲಿ 30 ನಿಮಿಷಗಳ ಕಾಲ ನಿಗಾವಹಿಸಲಾಯಿತು ಎಂದು ತಿಳಿಸಿದರು.