ಶಹಾಬಾದ : ಸಬಕಾ ಮಾಲಿಕ್ ಏಕ್ ಹೇ ಎಂದು ಸಾರಿದ ಮಾನವೀಯತೆಯ ಹರಿಕಾರರಾದ ಸಾಯಿಬಾಬಾ ಅವರ ದೇವಾಲಯ ನಿರ್ಮಾಣ ಮಾಡಿ ಗ್ರಾಮದಲ್ಲಿ ಧಾರ್ಮಿಕ ಕಾರ್ಯ ಹಮ್ಮಿಕೊಂಡಿರುವುದರಿಂದ ಜನರಲ್ಲಿ ಒಳ್ಳೆಯ ಸಂಸ್ಕಾರ ಬೆಳೆಯುತ್ತದೆ ಎಂದು ಮುಗುಳನಾಗಾವನ ಸಿದ್ಧಲಿಂಗ ಶಿವಾಚಾರ್ಯರು ಹೇಳಿದರು.
ಅವರು ಭಂಕೂರ ಗ್ರಾಮದಲ್ಲಿ ಶ್ರೀ ಸಾಯಿನಾಥ ಮಂದಿರ ಕಮಿಟಿ ವತಿಯಿಂದ ಆಯೋಜಿಸಲಾದ ಶ್ರೀ ಸಾಯಿನಾಥ ಮಂದಿರದ ಉದ್ಘಾಟನಾ ಸಮಾಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಗ್ರಾಮಗಳಲ್ಲಿ ದೇವಾಲಯಗಳು ಹಾಗೂ ಶಾಲೆಗಳು ಇರಲೇಬೇಕು. ಶಾಲೆಗಳು ಜ್ಞಾನದ ದಾಸೋಹ ಮಾಡುವುದರ ಮೂಲಕ ಜೀವನ ನಡೆಸುವುದನ್ನು ಕಲಿಸಿ ಕೊಟ್ಟರೇ, ದೇವಾಲಯಗಳು ನಮ್ಮ ಅಂತರಂಗದ ಶುದ್ಧಿ ಹಾಗೂ ಮಾನಸಿಕ ನೆಮ್ಮದಿ ನೀಡಿ ಸಮಾಜದಲ್ಲಿ ಸೌಹಾರ್ದತೆಯನ್ನು ನಿರ್ಮಾಣ ಮಾಡುತ್ತದೆ. ಗ್ರಾಮದಲ್ಲಿ ದೇವಾಲಯಗಳ ನಿರ್ಮಾಣ ಹಾಗೂ ದೇವಾಲಯಗಳಲ್ಲಿ ಪೂಜಾ ಪುನಸ್ಕಾರ ಕಾರ್ಯಕ್ರ,ಮಗಳನ್ನು ಶ್ರದ್ಧಾ ಭಕ್ತಿಯಿಂದ ಮಾಡುವುದರಿಂದ ಮಾನವ ಸಂಬಂಧಗಳು ಗಟ್ಟಿಗೊಳ್ಳುತ್ತವೆ.ಪ್ರತಿನಿತ್ಯ ಪೂಜೆ, ಪುನಸ್ಕಾರದಲ್ಲಿ ತೊಡಗುವುದರಿಂದ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಬಹುದು ಎಂದರು.
ತೊನಸನಹಳ್ಳಿಯ ಮಲ್ಲಣ್ಣಪ್ಪ ಮಹಾಸ್ವಾಮಿಗಳು ಮಾತನಾಡಿ,ಮ ಸಮಾಜದ ಒಳಿತಿಗಾಗಿ ತಮ್ಮ ಕೈಲಾದ ಸಹಾಯ ಮಾಡಿದರೆ ಬದುಕಿನಲ್ಲಿ ಆತ್ಮತೃಪ್ತಿ ಲಭಿಸುತ್ತದೆ. ಶಾಶ್ವತ ಸಾರ್ಥಕತೆಯನ್ನು ಮತ್ತೊಬ್ಬರಿಗೆ ಸಹಕಾರ ಮಾಡುವುದರಲ್ಲೂ ಮತ್ತು ಒಳ್ಳೆಯ ಕಾರ್ಯ ನೇರವೇರಿಸುವುದರಲ್ಲಿ ಕಂಡುಕೊಳ್ಳಬೇಕೆಂದರು.ಅಲ್ಲದೇ ಈ ನೆಲದ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿರುವುದು ನಮೆಮಲ್ಲರ ಜವಾಬ್ದಾರಿಯಾಗಿದೆ. ದೇವಾಲಯ ನಿರ್ಮಾಣಕ್ಕೆ ಮಾಡಿದರೇ ಸಾಲದು, ಎಲ್ಲರೂ ಒಂದಾಗಿ ಕೆಲಸ ಮಾಡುವ ಮೂಲಕ ಪರಸ್ಪರ ಸಹೋರ‍್ತವ ಸಮಾಜ ನಿರ್ಮಾಣ ಮಾಡಬೇಕೆಂದು ಹೇಳಿದರು.
ಶ್ರೀನಿವಾಸ ಸರಡಗಿಯ ಡಾ. ಅಪ್ಪಾರಾವ ದೇವಿ ಮುತ್ಯಾ, ಮುಗುಳನಾಗಾವನ ಜೇಮಸಿಂಗ ಮಹಾರಾಜರು, ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ, ಮಾಜಿ ಶಾಸಕ ವಾಲ್ಮೀಕಿ ನಾಯಕ, ಮಾಜಿ ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಶಾಮರಾವ ವಗ್ಗನ್, ವೀರಶೈವ ಸಮಾಜದ ಮುಖಂಡ ಶಶಿಕಾಂತ ಪಾಟೀಲ,ಎಮ್.ಹೆಚ್.ಕುಲಕರ್ಣಿ,ಬಿಜೆಪಿ ಚಿತ್ತಾಪೂರ ಮಂಡಲ ಅಧ್ಯಕ್ಷ ನೀಲಕಂಠರಾವ ಪಾಟೀಲ, ಕೋಲಿ ಸಮಾಜದ ಅಧ್ಯಕ್ಷ ಲಕ್ಷ್ಮಿಕಾಂತ ಕಂದಗೂಳ,ಕುರುಬ ಸಮಾಜದ ಅಧ್ಯಕ್ಷ ರಾಮಲಿಂಗ ಸರಡಗಿ, ಗೊಂದಲಿ ಸಮಾಜದ ಅಧ್ಯಕ್ಷ ಸುನೀಲ ಜೋಶಿ, ರಮೇಶ ಅಳೊಳ್ಳಿ ಉಪಸ್ಥಿತರಿದ್ದರು.ಶ್ರೀ ಸಾಯಿನಾಥ ಮಂದಿರ ಕಮಿಟಿ ಅಧ್ಯಕ್ಷ ಪರಶುರಾಮ ಜೋಷಿ ಅಧ್ಯಕ್ಷತೆ ವಹಿಸಿದ್ದರು.
ಮಲ್ಲಿಕಾರ್ಜುನ ಸಿರಗೊಂಡ ನಿರೂಪಿಸಿದರು, ನಿಂಗಣ್ಣ.ಎಸ್.ನಂದಿಹಳ್ಳಿ ಸ್ವಾಗತಿಸಿದರು, ಶರಣಪ್ಪ ಮೂಡ್ಲಿ ವಂದಿಸಿದರು.