ವಾಡಿ: ವ್ಯವಹಾರ ನಷ್ಟ ಹಾಗೂ ಲಾಕ್‌ಡೌನ್ ನೆಪದಲ್ಲಿ ಕೆಲಸ ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿ ಮಂಗಳವಾರ ದಿಢೀರ್ ಪ್ರತಿಭಟನೆಗಿಳಿದಿದ್ದ ಎಸಿಸಿ ಪವರ್ ಪ್ಲ್ಯಾಂಟ್ ನೂರಾರು ಗುತ್ತಿಗೆ ಕಾರ್ಮಿಕರಿಗೆ ಕೆಲಸದ ಭರವಸೆ ದೊರೆತಿದ್ದು, ಪ್ರತಿಭಟನೆ ಕೈಬಿಡುವ ಮೂಲಕ ಗುರುವಾರ ಕೆಲಸಕ್ಕೆ ಹಾಜರಾಗಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪವರ್ ಪ್ಲ್ಯಾಂಟ್ ಕಾರ್ಮಿಕ ಮುಖಂಡ ರವಿ ಕೋಳಕೂರ, ಪ್ರತಿ ತಿಂಗಳು ೨೬ ದಿನ ಕಡ್ಡಾಯವಾಗಿ ಕೆಲಸ ನೀಡುತ್ತಿದ್ದ ಎಸಿಸಿ ಆಡಳಿತ ಕೊರೊನಾ ಲಾಕ್‌ಡೌನ್ ನಂತರ ಕೇವಲ ಹತ್ತು ದಿನ ಮಾತ್ರ ಕೆಲಸ ನೀಡಲು ಶುರುಮಾಡಿತ್ತು. ಕುಟುಂಬ ನಿರ್ವಹಣೆ ಕಷ್ಟವಾದರೂ ಆರೋಗ್ಯದ ದೃಷ್ಠಿಯಿಂದ ಸಹಿಸಿಕೊಂಡೇವು. ಲಾಕ್‌ಡೌನ್ ನಂತರವೂ ಕಂಪನಿ ಇದೇ ಪದ್ಧತಿ ಮುಂದುವರೆಸುವ ಮೂಲಕ ೩೦೦ ಕಾರ್ಮಿಕರನ್ನು ಕೆಲಸದಿಂದ ವಂಚಿಸಲು ಮುಂದಾಯಿತು.
ಮೌಕಿಕವಾಗಿ ಮನವಿ ಮಾಡಿಕೊಂಡರೂ ಎಸಿಸಿ ಕಂಪನಿಯ ಅಧಿಕಾರಿಗಳು ನಮ್ಮ ಗೋಳು ಕೇಳಲಿಲ್ಲ. ಕೊನೆಗೆ ಕಂಪನಿಯ ಮೋಸದ ವಿರುದ್ಧ ಹೋರಾಟಕ್ಕೆ ಮುಂದಾಗಬೇಕಾಯಿತು. ಹೋರಾಟಕ್ಕೆ ಮಣಿದ ಎಸಿಸಿ ಆಡಳಿತವು ವಾಡಿ ಸಿಮೆಂಟ್ ಮಜ್ದೂರ್ ಯೂನಿಯನ್ ಮುಖಂಡರ ಮಧ್ಯಸ್ಥಿಕೆಯಿಂದಾಗಿ ಸದ್ಯ ತಿಂಗಳಿಗೆ ೨೨ ದಿನ ಕೆಲಸ ಕೊಡಲು ಒಪ್ಪಿಕೊಂಡಿದ್ದು, ಮುಂದಿನ ದಿನಗಳಲ್ಲಿ ೨೬ ಹಾಜರಿ ಕೊಡುವುದಾಗಿ ಭರವಸೆ ನೀಡಿದ್ದಾರೆ.
ಹೀಗಾಗಿ ತಾತ್ಕಾಲಿಕವಾಗಿ ಹೋರಾಟ ಕೈಬಿಟ್ಟು ಕೆಲಸಕ್ಕೆ ಹಾಜರಾಗಿದ್ದೇವೆ ಎಂದು ತಿಳಿಸಿರುವ ರವಿ ಕೋಳಕೂರ, ಪ್ರತಿದಿನ ಕೆಲಸ ಕಡ್ಡಾಯ ಬೇಡಿಕೆ ಈಡೇರದಿದ್ದರೆ ಮತ್ತೆ ಹೋರಾಟ ಆರಂಭಿಸಲಾಗುವುದು ಎಂದು ಕಂಪನಿಗೆ ಎಚ್ಚರಿಕೆ ನೀಡಿದ್ದೇವೆ ಎಂದು ಪ್ರತಿಕ್ರೀಯಿಸಿದ್ದಾರೆ.