ವಾಡಿ: ಆನೆಕಾಲು ರೋಗ ಮುಕ್ತ ಸಮಾಜ ನಿರ್ಮಿಸಲು ಸರಕಾರ ಪಣತೊಟ್ಟಿದ್ದು, ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ರೋಗ ನಿರೋಧಕ ಮಾತ್ರೆಗಳ ಸೇವನೆಯಿಂದ ಮಾತ್ರ ಈ ಹೆಮ್ಮಾರಿಯಿಂದ ರಕ್ಷಣೆ ಪಡೆಯಬಹುದಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ ಬುಳ್ಳಾ ಹೇಳಿದರು.
ಪಟ್ಟಣದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಪುರಸಭೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಆನೆಕಾಲು ರೋಗ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಮೇಲ್ನೋಟಕ್ಕೆ ವ್ಯಕ್ತಿ ಆರೋಗ್ಯವಂತನಾಗಿ ಕಂಡರೂ ಅರಿವಿಲ್ಲದಂತೆ ರಕ್ತದಲ್ಲಿ ಆನೆಕಾಲು ರೋಗ ಉಂಟುಮಾಡುವಂತಹ ಜಂತುಗಳು ಜನಿಸಿರುತ್ತವೆ. ಅದು ನಿಧಾನವಾಗಿ ಕಾಲನ್ನು ಕೊಳೆಸುತ್ತದೆ. ಸಕಾಲದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಜೀವನಪೂರ್ತಿ ದಪ್ಪ ಆನೆಕಾಲನ್ನು ಹೊತ್ತು ತಿರುಗಬೇಕಾಗುತ್ತದೆ. ವರ್ಷದಲ್ಲಿ ಒಮ್ಮೆ ಐವರ್ ಮೆಕ್ಟಿನ್, ಡಿಇಸಿ ಮತ್ತು ಅಲ್ಬೆಂಡಜೋಲ್ ಮಾತ್ರೆಗಳನ್ನು ಸೇವನೆ ಮಾಡಿದರೆ ಆನೆಕಾಲು ರೋಗದಿಂದ ಮುಕ್ತರಾಗಿ ಆರೋಗ್ಯಯುಕ್ತ ಜೀವನ ನಡೆಸಬಹುದು ಎಂದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ವಿಚಾರಕಿ ಅನಿತಾ ಮಲಗೊಂಡ ಮಾತನಾಡಿ, ಆರೋಗ್ಯ ಇಲಾಖೆಯಿಂದ ಆನೆಕಾಲು ರೋಗ ನಿವಾರಣೆಯ ಗುರಿ ಹೊಂದಲಾಗಿದೆ. ಇದೇ ಜ.೨೨ ರಿಂದ ೩೧ರ ವರೆಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಯೊಂದು ಮನೆಗೂ ಭೇಟಿ ನೀಡಿ ಮಕ್ಕಳು ಮತ್ತು ಗರ್ಭಿಣಿಯರನ್ನು ಹೊರೆತುಪಡಿಸಿ ಉಳಿದ ಎಲ್ಲರಿಗೂ ಮಾತ್ರೆಗಳನ್ನು ಉಚಿತವಾಗಿ ವಿತರಿಸಲು ಬರುತ್ತಿದ್ದಾರೆ. ಮಾತ್ರೆಗಳ ಸೇವನೆಯಿಂದ ಅಡ್ಡಪರಿಣಾಮ ಇರುವುದಿಲ್ಲ. ನಮ್ಮ ಆರೋಗ್ಯಕ್ಕಾಗಿ ಮಾತ್ರ ಸೇವನೆ ಕಡ್ಡಾಯ ಎಂದು ವಿವರಿಸಿದರು.
ಪುರಸಭೆ ಅಧ್ಯಕ್ಷೆ ಝರೀನಾಬೇಗಂ, ಉಪಾಧ್ಯಕ್ಷ ತಿಮ್ಮಯ್ಯ ಪವಾರ, ಸಮುದಾಯ ಸಂಘಟನಾಧಿಕಾರಿ ಚಂದ್ರಕಾಂತ ಪಾಟೀಲ, ಕಂದಾಯ ಅಧಿಕಾರಿ ಎಂ.ಪಂಕಜಾ, ಕೆ.ವಿರೂಪಾಕ್ಷಿ, ಶ್ರವಣಕುಮಾರ ಭಟ್ಟರ್ಕಿ, ಸಮುದಾಯ ಸಂಘಟಕ ಕಾಶೀನಾಥ ಧನ್ನಿ, ಕಿರಿಯ ಆರೋಗ್ಯ ಸಹಾಯಕಿ ವಿಜಯಲಕ್ಷ್ಮೀ ನಾಟೇಕರ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.