ಕಲಬುರಗಿ: ಯಾವುದೇ ವಸ್ತು ಅಥವಾ ಉತ್ಪನ್ನ ಖರೀದಿಸಿ ವಂಚನೆಗೀಡಾಗುವ ಗ್ರಾಹಕರಿಗೆ ಗ್ರಾಹಕ ಸಂರಕ್ಷಣಾ ಕಾಯಿದೆ-2019ರ ಕಾಯ್ದೆ ರಕ್ಷಣೆ ನೀಡಲಿದೆ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಗೌರವಾನ್ವಿತ ನೆಲ್ಹಾಳ ಶರಣಪ್ಪ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ-2020 ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಹಕ ಸಂರಕ್ಷಣಾ ಕಾಯಿದೆ-2019ರ ಹೊಸ ವೈಶಿಷ್ಟ್ಯಗಳನ್ನು ಕುರಿತು ಸಭಿಕರಿಗೆ ಓದಿ ತಿಳಿಸಿದ ಅವರು ವಂಚನೆಗೆ ಒಳಗಾಗುವ ಗ್ರಾಹಕರಿಗೆ ಈ ಕಾಯ್ದೆಯಡಿ ಪರಿಹಾರ ದೊರೆಯಲಿದ್ದು, ಅದರ ಪ್ರಯೋಜನ ಪಡೆಯಬೇಕೆಂದು ಅವರು ತಿಳಿಸಿದರು.
ಕಲಬುರಗಿ ನ್ಯಾಯವಾದಿಗಳಾದ ಅನಿತಾ ಎಂ.ರೆಡ್ಡಿ ಉಪನ್ಯಾಸ ನೀಡಿ, ಯಾವುದಾದರೂ ಉತ್ಪನ್ನ/ವಸ್ತುವನ್ನು ಖರೀದಿಸುವ ಮುನ್ನ, ನಾವು ಜಾಗೃತಿವಹಿಸಿ ಕೊಂಡುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಈಗಿನ ಗ್ರಾಹಕ ಸಂರಕ್ಷಣಾ ಕಾಯಿದೆ-2019ವು ಹಳೆಯ ಗ್ರಾಹಕರ ಕಾಯ್ದೆಕ್ಕಿಂತಲೂ ಹೆಚ್ಚು ಶಕ್ತಿಶಾಲಿಯಾಗಿದ್ದು, ಗ್ರಾಹಕರ ಹಿತರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದರು.
ಯಾವುದೇ ಒಂದು ಉತ್ಪನ್ನ ಅಥವಾ ವಸ್ತು ಮಾರುಕಟ್ಟೆಗೆ ಬಂದು 6 ತಿಂಗಳು ಕಳೆದರೆ, ಅದನ್ನು ಹಳೆಯ ಉತ್ಪನ್ನ ಎಂದು ಪರಿಗಣಿಸಲಾಗುತ್ತದೆ. ಆದರೆ ಮಾರುಕಟ್ಟೆಗೆ ಬಂದು 6 ತಿಂಗಳಾದರೂ, ಮಾರುಕಟ್ಟೆಗೆ ಹೊಸದಾಗಿ ಉತ್ಪನ್ನ (ನ್ಯೂ ಪ್ರಾಡಕ್ಟ್) ಎಂದು ಗ್ರಾಹಕರನ್ನು ವಂಚಿಸುವ ಪ್ರಸಂಗಗಳು ನಡೆಯುತ್ತಿರುತ್ತವೆ ಎಂದು ದೂರಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯವಾದಿ ಹಾಗೂ ಮಹಾತ್ಮಗಾಂಧಿಜೀ ಹಿತರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ವೈಜನಾಥ ಝಳಕಿ ಅವರು, ಗ್ರಾಹಕರ ಹಳೆ ಕಾಯ್ದೆ ಪ್ರಕಾರ, ಯಾವುದೇ ಒಂದು ವಸ್ತುವನ್ನು ಖರೀದಿಸಿ, ಅದಕ್ಕೆ ಸಂಬಂಧಿಸಿದ ದೂರು ನೀಡುವುದಾದರೆ, ಆ ಉತ್ಪನ್ನ ಖರೀದಿಸಿದ ವ್ಯಾಪ್ತಿಯಲ್ಲೇ ದೂರು ನೀಡಬೇಕಿತ್ತು. ಆದರೆ, ಗ್ರಾಹಕ ಸಂರಕ್ಷಣಾ ಕಾಯಿದೆ-2019ರಂತೆ ಒಂದು ಉತ್ನನ್ನ ಖರೀದಿಸಿದ ಗ್ರಾಹಕ, ಅದಕ್ಕೆ ಸಂಬಂಧಿಸಿದ ದೂರನ್ನು ದೇಶದ ಯಾವುದೇ ಸ್ಥಳದಲ್ಲಿದ್ದರೂ ಅಲ್ಲಿಯೇ ದೂರನ್ನು ನೀಡಬಹುದು ಎಂದು ವಿವರಿಸಿದರು.
ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಕಲಬುರಗಿ ಇವುಗಳ ಸಂಯುಕ್ರಾಶಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ನಾಗಶೆಟ್ಟಿ ಜಿ.ಗಂದಗೆ, ಆಯೋಗದ ಮಹಿಳಾ ಸದಸ್ಯೆ ಮಾಲತಿ ಗುರಣ್ಣ, ಕಲಬುರಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ದಯಾನಂದ ಪಾಟೀಲ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಇದ್ದರು.