ಶಹಾಬಾದ:ಅಂಗವಿಕಲ, ವೃದ್ಧಾಪ್ಯ ಮತ್ತು ವಿಧವಾ ವೇತನವನ್ನು ತಕ್ಷಣ ನೀಡಬೇಕೆಂದು ಆಗ್ರಹಿಸಿ ಗುರುವಾರ ಹೊನಗುಂಟಾ ಗ್ರಾಮದ ಪಿಂಚಣಿ ಫಲಾನುವಿಗಳು ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟ ಸಮಿತಿಯಿಂದ ಹೊನಗುಂಟಾ ಗ್ರಾಮದ ಅಂಚೆ ಇಲಾಖೆಯ ಮೇಲ್ವಿಚಾರಕರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ವಿದ್ಯಾರ್ಥಿ ಒಕ್ಕೂಟದ ತಾಲೂಕಾ ಸಂಚಾಲಕ ಪೂಜಪ್ಪ ಮೇತ್ರೆ, ಸುಮಾರು ನಾಲ್ಕು ತಿಂಗಳಿನಿಂದ ಪಿಂಚಣಿ ಹಣ ಪಾವತಿಯಾಗದೇ ಅಂಗವಿಕಲರು, ವೃದ್ಧರು ಹಾಗೂ ವಿಧವೆಯರು ಪರಿತಪಿಸುತ್ತಿದ್ದಾರೆ. ಕೊರೋನಾ ಸಂಕಷ್ಟದ ಸಮಯದಲ್ಲಿ ಸಕಾಲಕ್ಕೆ ಪಿಂಚಣಿ ಕೈಗೆ ಸಿಗದೇ ಅಗತ್ಯ ಔಷಧಗಳನ್ನು ಕೊಳ್ಳಲೂ ಈ ಫಲಾನುಭವಿಗಳು ಪರದಾಡುತ್ತಿದ್ದಾರೆ.
ಹಲವು ಮಂದಿಗೆ ತುತ್ತು ಊಟಕ್ಕೂ ತೊಂದರೆ ಇದೆ. ಸುಮಾರು ನಾಲ್ಕು ತಿಂಗಳುಗಳಿಂದ ಹಣ ಬಂದಿಲ್ಲ.ಹಣಕ್ಕಾಗಿ ಗ್ರಾಮದ ಅಂಚೆ ಕಚೇರಿಗೆ ತೆರಳಿ ವಿಚಾರಿಸಿದರೇ ಈಗಾಗಲೇ ಮೂರು ತಿಂಗಳ ಪಿಂಚಣಿ ಹಣ ಬಂದಿದ್ದು ಬೆಳಕಿಗೆ ಬಂದಿದೆ.ಆದರೂ ಇಲ್ಲಿನ ಸಿಬ್ಬಂದಿ ಮಾತ್ರ ನೀಡುವಲ್ಲಿ ನಿರ್ಲಕ್ಷ್ಯತನ ತೋರಿದ್ದಾರೆ.ಹಣ ಬಂದು ನಾಲ್ಕು ತಿಂಗಳು ಕಳೆದರೂ ಹಣ ಯಾಕೇ ವಿತರಿಸಿಲ್ಲ ಎಂದು ಕೇಳಿದರೇ ಮೇಲ್ವಿಚಾರಕಿ ಯಾವುದೇ ಉತ್ತರ ನೀಡುತ್ತಿಲ್ಲ.ಅಲ್ಲದೇ ಎಲ್ಲಾ ಫಲಾನುಭವಿಗಳ ಪಾಸ್ ಬುಕ್ ಕೂಡ ಅಂಚೆ ಇಲಾಖೆಯ ಮೇಲ್ವಿಚಾರಕರ ಹತ್ತಿರವೇ ಇದುದ್ದನ್ನು ಕಂಡು ಆಶ್ಚರ್ಯವಾಗಿದೆ. ಫಲಾನುಭವಿಗಳಿಗೆ ಹಣ ನೀಡಿ ಪಾಸ್‌ಬುಕ್ ಅವರ ಹತ್ತಿರವೇ ಇಟ್ಟುಕೊಳ್ಳುತ್ತಿರುವುದು ನೋಡಿದರೇ ಬಡವರ ಪಿಂಚಣಿ ಹಣವನ್ನು ಲಪಟಾಯಿಸುವ ತಂತ್ರ ಉಪಯೋಗಿಸುತ್ತಿದ್ದಾರೆಯೇ ಎಂಬ ಸಂಶಯ ಮೂಡುತ್ತಿದೆ.
ಪಿಂಚಣಿ ಹಣಕ್ಕಾಗಿ ಕಳೆದ ೪ ತಿಂಗಳಿಂದ ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲ ಫಲಾನುಭವಿಗಳನ್ನು ಅಲೆದಾಡಿಸಲಾಗುತ್ತಿದೆ. ಕೂಡಲೇ ಪಿಂಚಣಿ ಹಣ ಫಲಾನುಭವಿಗಳ ಮನೆಗೆ ತಲುಪಿಸಬೇಕು.ಇಲ್ಲದಿದ್ದಲ್ಲಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದೆಂದು ತಿಳಿಸಿದರು.ಅದಕ್ಕೆ ಅಂಚೆ ಇಲಾಖೆಯ ಮೇಲ್ವಿಚಾರಕಿ ಶೀಲಾ ಅವರು ಮೂರು ತಿಂಗಳ ಪಿಂಚಣಿ ಬಂದಿದ್ದು ವಿತರಿಸಲಾಗುವುದೆಂದು ಹೇಳಿದರು.
ಫಲಾನುಭವಿಗಳಾದ ಭೀಮಶಾ ಗೋಯಪ್ಪ, ನಿಂಗಪ್ಪ ಬಸಲಿಂಗಪ್ಪ, ಕಾಶಿಬಾಯಿ ಶಿವಯೋಗಿ, ಶರಣಪ್ಪ ಹುಸನಪ್ಪ, ಭಾಗಮ್ಮ ರಾಮು,ಪದಮ್ಮ ರಾಯಪ್ಪ, ಮರೆಮ್ಮ ಭಾಗಪ್ಪ, ದಲಿತ ವಿದ್ಯಾರ್ಥಿ ಒಕ್ಕೂಟದ ನಗರ ಸಂಚಾಲಕ ಶರಣಬಸಪ್ಪ, ದಲಿತ ವಿದ್ಯಾರ್ಥಿ ಒಕ್ಕೂಟದ ಹೊನಗುಂಟಾ ಗ್ರಾಮ ಸಂಚಾಲಕ ರಾಘವೇಂದ್ರ ಗುಡೂರ್, ಪ್ರಕಾಶ ಮರೆಪ್ಪ, ನಿಂಗಪ್ಪ ನ್ಯಾವನಿ ಇತರರು ಇದ್ದರು.