ವಾಡಿ: ಪ್ರಥಮ ಮಹಿಳಾ ಶಿಕ್ಷಕಿ, ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ ೧೯೦ನೇ ಜಯಂತಿ ನಿಮಿತ್ತ ಜ.೨೫ ರಂದು ವಾಡಿ ನಗರದಲ್ಲಿ ಮಹಿಳಾ ಶಕ್ತಿ ಪ್ರದರ್ಶನ ನಡೆಯಲಿದೆ ಎಂದು ಸಾವಿತ್ರಿಬಾಯಿ ಫುಲೆ ಮಹಿಳಾ ಜಾಗೃತಿ ವೇದಿಕೆ ಅಧ್ಯಕ್ಷೆ ಸುಮಿತ್ರಾ ಬಿ.ದೊರೆ ತಿಳಿಸಿದರು.
ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಹಿಳೆಯರು ಎಲ್ಲಾ ರಂಗದಲ್ಲೂ ಶೋಷಣೆಗೊಳಗಾಗುತ್ತಿದ್ದಾರೆ. ಪುರುಷರಿಗೆ ಸರಿಸಮನಾಗಿ ಶ್ರಮಿಸುವ ಮಹಿಳೆ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ. ಶಿಕ್ಷಿತ ಮಹಿಳೆಯರೂ ಕೂಡ ತಮಗಾಗುವ ಅನ್ಯಾಯಗಳ ವಿರುದ್ಧ ದನಿ ಎತ್ತಲಾಗದೆ ಮೌನ ವಹಿಸುವ ಮೂಲಕ ಅಸಹಾಯಕತೆ ಪ್ರದರ್ಶಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಮಹಿಳೆಯರು ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅರಿಯುವಂತಾಗಬೇಕು ಎಂಬ ಕಾರಣಕ್ಕೆ ಕಾರ್ಮಿಕ ನಗರಿ ವಾಡಿಯಲ್ಲಿ ಮಹಿಳಾ ಶಶಕ್ರೀಕರಣ ಸಮಾರಂಭ ಏರ್ಪಡಿಸಲಾಗಿದೆ ಎಂದರು.
ಅಂದು ಬೆಳಗ್ಗೆ ೧೧:೦೦ ಗಂಟೆಗೆ ಸಾಹೇಬ ಫಕ್ಷನ್ ಹಾಲ್‌ನಲ್ಲಿ ಸಾರ್ವಜನಿಕ ಸಭೆ ಏರ್ಪಡಿಸಲಾಗಿದ್ದು, ಕೇವಲ ಮಹಿಳೆಯರು ಮಾತ್ರ ಪಾಲ್ಗೊಳ್ಳುವರು. ಮಾಜಿ ಸಚಿವ, ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಪನ್ಯಾಸಕಿ ಡಾ.ಮೀನಾಕ್ಷಿ ಬಾಳಿ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ, ಶಾಸಕಿ ಖನೀಜ್ ಫಾತಿಮಾ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಪುರಸಭೆ ಅಧ್ಯಕ್ಷೆ ಝರೀನಾಬೇಗಂ, ಇಂದಿರಾಬಾಯಿ ಶ್ರೀನಿವಾಸಗುಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಇದೇ ವೇಳೆ ಗ್ರಾಪಂ ಚುನಾವಣೆಯಲ್ಲಿ ಗೆದ್ದ ಮಹಿಳಾ ಸದಸ್ಯರು ಸಾಮೂಹಿಕವಾಗಿ ಸನ್ಮಾನಿಸಲಾಗುತ್ತಿದೆ. ವಿವಿಧ ಸಮುದಾಯದ ಸಾವಿರಾರು ಜನ ಮಹಿಳೆಯರು ಈ ಬೃಹತ್ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಪುರುಷರಿಲ್ಲದ ಹಾಗೂ ಪಕ್ಷಾತೀತವಾದ ಕೇವಲ ಮಹಿಳೆಯರೇ ಇರುವ ಕಾರ್ಯಕ್ರಮ ಇದಾಗಿದೆ ಎಂದು ಸುಮಿತ್ರಾ ದೊರೆ ಮಾಹಿತಿ ನೀಡಿದರು. ಸಾವಿತ್ರಿಬಾಯಿ ಫುಲೆ ಮಹಿಳಾ ಜಾಗೃತಿ ವೇದಿಕೆಯ ಗೌರವಾಧ್ಯಕ್ಷೆ ಜಿ.ಕೆ.ಇಂದಿರಾ, ಪ್ರಧಾನ ಕಾರ್ಯದರ್ಶಿ ಶಕುಂತಲಾ ಪೊದ್ದಾರ, ಉಪಧ್ಯಕ್ಷೆ ಬಾಲಮ್ಮ ಕೋಟರಗಿ ಸುದ್ದಿಗೋಷ್ಠಿಯಲ್ಲಿದ್ದರು.